ನಿತ್ಯವೂ ಸರಾಯಿ ಕುಡಿಯುತ್ತಿದ್ದ ಭಟ್ಕಳದ ಪಾಂಡು ನಾಯ್ಕ ಅವರು ಅದೇ ನಶೆಯಲ್ಲಿ ವಿಷ ಸೇವಿಸಿದ್ದಾರೆ. ಹೊಟ್ಟೆಗೆ ಇಲಿ ಮದ್ದು ಸೇರಿದ ಪರಿಣಾಮ ಮೂರು ದಿನದ ನರಳಾಟ ನಡೆಸಿ ನಿನ್ನೆ ಅವರು ಸಾವನಪ್ಪಿದ್ದಾರೆ.
ಭಟ್ಕಳದ ಗುಳ್ಮೆ ಬೆಳಲಖಂಡದಲ್ಲಿ ಪಾಂಡು ನಾಯ್ಕ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ದುಡಿಮೆಯ ಹಣವನ್ನು ಅವರು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಅಗಷ್ಟ 1ರಂದು ದುಡಿದ ಹಣದಲ್ಲಿ ಸರಾಯಿ ಖರೀದಿಸಿದ ಅವರು ನಶೆಯಲ್ಲಿ ತೇಲಾಡುತ್ತಿದ್ದರು.
ಸಂಜೆ 6 ಗಂಟೆ ವೇಳೆಗೆ ಸರಾಯಿ ಎಂದು ಭಾವಿಸಿ ಮನೆಯಲ್ಲಿದ್ದ ವಿಷವನ್ನು ಕುಡಿದರು. ಅದಾದ ನಂತರ ಅಸ್ವಸ್ಥಗೊಂಡ ಪಾಂಡು ನಾಯ್ಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿನ ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ. ಕೊನೆಗೆ ಅಗಷ್ಟ 4ರಂದು ಅವರು ಸಾವನಪ್ಪಿದರು.
ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಪಾಂಡು ನಾಯ್ಕ ಅವರ ಮಗ ನಾಗೇಶ ನಾಯ್ಕ ಅವರು ತಂದೆ ಸಾವಿನ ಸುದ್ದಿ ಕೇಳಿ ಮನೆಗೆ ಬಂದರು. ನಡೆದ ವಿದ್ಯಮಾನಗಳ ಬಗ್ಗೆ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
Discussion about this post