`ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊರತೆ ಇಲ್ಲ’ ಎಂದು ಸರ್ಕಾರ ಹೇಳುತ್ತದೆ. ಆದರೆ, ಕುಮಟಾದ ಹೆರವಟ್ಟಾ ಸಮೀಪದ ಸೋಕನಮಕ್ಕಿ ಗ್ರಾಮದ ಅಭಿವೃದ್ಧಿಗೆ ಮಾತ್ರ ಸರ್ಕಾರದ ಸಹಾಯ ಸಿಗುತ್ತಿಲ್ಲ.
ಪ್ರತಿ ವರ್ಷ ಮಳೆಗಾಲದಲ್ಲಿ ಈ ಊರಿಗೆ ನೀರು ನುಗ್ಗುತ್ತದೆ. ಪರಿಣಾಮ ರಸ್ತೆಯ ಮೇಲೆ 4 ಅಡಿಗಳಷ್ಟು ನೀರು ನಿಲ್ಲುತ್ತದೆ. ಇದರಿಂದ ವಾಹನ ಸಂಚಾರದ ಜೊತೆ ಮನುಷ್ಯ ನಡೆದಾಡುವುದು ಸಹ ಕಷ್ಟವಾಗುತ್ತದೆ. ಈ ಸಮಸ್ಯೆ ಬಗೆಹರಿಸಿ ಎಂದು ಊರಿನ ಜನ ಸ್ಥಳೀಯ ಆಡಳಿತದಿಂದ ಹಿಡಿದು ಶಾಸಕ-ಸಚಿವರವರೆಗೆ ಮನವಿ ಮಾಡಿದ್ದಾರೆ. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ.
ಹಿಂದುಳಿದ ವರ್ಗದ ಹಾಲಕ್ಕಿ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿದ್ದಾರೆ. ಅವರು ತಮಗೆ ಮತ ಕೊಡುವುದಿಲ್ಲ ಎಂಬ ಕಾರಣಕ್ಕೆ ಅಧಿಕಾರದಲ್ಲಿದ್ದವರು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪವ್ಯಕ್ತವಾಗಿದೆ. ಮಳೆಗಾಲದ ಸಮಸ್ಯೆ ಬಗೆಹರಿಸಲು ಇಚ್ಚಾಶಕ್ತಿ ಕೊರತೆ ಎದ್ದು ತೋರುತ್ತಿದ್ದು, ಪ್ರತಿ ವರ್ಷದ ಮಳೆಗಾಲದಲ್ಲಿಯೂ ಇಲ್ಲಿನ ಜನ ನರಕ ಅನುಭವಿಸುತ್ತಿದ್ದಾರೆ.
ಮಳೆ ನೀರು ರಸ್ತೆ ಮೇಲೆ ನಿಂತಾಗಲೆಲ್ಲ ಜನ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ಸಮಸ್ಯೆ ಬಗ್ಗೆ ಜನರಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಅನುದಾನ ಕೊರತೆ ಎಂಬ ಹಾರಿಕೆ ಉತ್ತರ ಮಾತ್ರ ಜನರಿಗೆ ಸಿಗುತ್ತಿದೆ. `ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಜನಪ್ರತಿನಿಧಿಗಳು ಸಹ ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂಬುದು ಅಲ್ಲಿನವರ ನೋವು.
Discussion about this post