ಯಲ್ಲಾಪುರದ ಅರಣ್ಯ ಪ್ರದೇಶದಲ್ಲಿ ಆಶೀಯಾ ಸಮಾಜ ಸೇವಾ ಸಂಸ್ಥೆ ಹಣ್ಣಿನ ಗಿಡ ನಾಟಿ ಕಾರ್ಯ ಶುರು ಮಾಡಿದೆ. ಸದ್ಯ ಕವಡಿಕೆರೆ ಪಕ್ಕದ ಅರಣ್ಯದಲ್ಲಿ ಹಲಸು, ನೇರಲೆ, ಮಾವು, ಮುರಗಲು ಸೇರಿ ಬಗೆ ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಗಿದೆ.
ಪರಿಸರ ಸಂರಕ್ಷಣೆಗಾಗಿ ಆಶೀಯಾ ಸಮಾಜ ಸೇವಾ ಸಂಸ್ಥೆ ಶ್ರಮಿಸುತ್ತಿದೆ. ಈ ಸಂಸ್ಥೆಯ ಮಹತ್ವದ ಯೋಜನೆಗಳಲ್ಲಿ ಸಾವಿರ ಹಣ್ಣಿನ ಗಿಡ ನೆಟ್ಟು ಪೋಷಿಸುವ ಅಭಿಯಾನವೂ ಒಂದಾಗಿದ್ದು, ಕಳೆದ ತಿಂಗಳು ಶಾಸಕ ಶಿವರಾಮ ಹೆಬ್ಬಾರ್ ಇದಕ್ಕೆ ಚಾಲನೆ ನೀಡಿದ್ದರು. ಅದಾದ ನಂತರ ಆಶೀಯಾ ಸಮಾಜ ಸೇವಾ ಸಂಸ್ಥೆಯವರು ದಿ ಓಂ ಪೌಂಡೇಶನ್ ಸಹಯೋಗದಲ್ಲಿ ಅರಣ್ಯ ಪ್ರವೇಶ ಮಾಡಿದ್ದು, ಅಲ್ಲಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
`ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊರತೆ ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಗಿಡ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆ ಪರೋಪಕಾರದ ಸಂದೇಶ ಸಾರಲಾಗುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷರಾದ ಅನಿಲ್ ಮರಾಠೆ ಮಾಹಿತಿ ನೀಡಿದರು. `ಮುಂದಿನ ದಿನದಲ್ಲಿ ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗಿಡ ನೆಡುವ ಅಭಿಯಾನ ನಡೆಯಲಿದೆ. ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಸಂಸ್ಥೆಯ ಕಾರ್ಯದರ್ಶಿ ವಿಜಯ್ ನಾಯಕ್ ಮನವಿ ಮಾಡಿದರು.
`ಆಶೀಯಾ ಸಮಾಜ ಸೇವಾ ಸಂಸ್ಥೆ ಪರಿಸರ ಸಂರಕ್ಷಣೆ ಜೊತೆ ಮಾದಕ ವ್ಯಸನಗಳ ವಿರುದ್ಧವೂ ಹೋರಾಡುತ್ತಿದೆ. ಮೊಬೈಲ್ ಬಳಕೆ ದುಷ್ಪರಿಣಾಮ, ಆರೋಗ್ಯ ಕಾಳಜಿ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುತ್ತದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ, ವ್ಯಕ್ತಿತ್ವ ವಿಕಸನದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತದೆ’ ಎಂದು ಈ ಅಭಿಯಾನದಲ್ಲಿ ಭಾಗಿಯಾಗಿರುವ ಸಂಸ್ಥೆಯ ಪದಾಧಿಕಾರಿಗಳಾದ ರಾಧಾ ಸಿದ್ದಿ, ರವೀನ ಭಜಂತ್ರಿ ಹಾಗೂ ಶೈಲಾ ನಾಯರ್ ವಿವರಿಸಿದರು.
Discussion about this post