ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಗುತ್ತಿಗೆಪಡೆದ ಐಆರ್‌ಬಿ ಕಂಪನಿ ಅಭಿವೃದ್ಧಿ ಕೆಲಸಕ್ಕಾಗಿ ನಾಮಧಾರಿ ಸಮುದಾಯದ ಸ್ಮಶಾನ ಭೂಮಿಯನ್ನು ವಶಕ್ಕೆಪಡೆದಿದೆ. ಹೀಗಾಗಿ ಅಂಕೋಲಾದ ಶಿರೂರಿನಲ್ಲಿ ಈ ಸಮುದಾಯದ ಜನ ಸಾವನಪ್ಪಿದರೂ ಅವರನ್ನು ಸುಡಲು ಯೋಗ್ಯ ಸ್ಥಳವಿಲ್ಲ!
ಕಳೆದ ವರ್ಷ ಗುಡ್ಡ ಕುಸಿತದ ಅವಧಿಯಲ್ಲಿ ಲಕ್ಷ್ಮಣ ನಾಯ್ಕ ಕುಟುಂಬದವರು ಸಾವನಪ್ಪಿದರು. ಅವರ ಅಂತ್ಯಕ್ರಿಯೆಗೂ ಸ್ಮಶಾನ ಭೂಮಿ ಸಿಕ್ಕಿರಲಿಲ್ಲ. ಹೀಗಾಗಿ ಕುಟುಂಬದ ಸ್ವಂತ ಜಾಗದಲ್ಲಿ ಅನಿವಾರ್ಯವಾಗಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಅದಾದ ನಂತರ ನವಚೈತನ್ಯ ನಾಮಧಾರಿ ಸಂಘದವರು ಸ್ಮಶಾನ ಭೂಮಿ ಮರಳಿ ಕೊಡಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಈವರೆಗೂ ಅವರ ಬೇಡಿಕೆಗೆ ಸರಿಯಾಗಿ ಸ್ಪಂದಿಸಿಲ್ಲ.
ಮೊದಲು ಹೆದ್ದಾರಿ ಪಕ್ಕದಲ್ಲಿಯೇ ನಾಮಧಾರಿ ಸಮುದಾಯದ ಸ್ಮಶಾನ ಭೂಮಿ ಇತ್ತು. ಹೆದ್ದಾರಿ ಅಗಲೀಕರಣಕ್ಕಾಗಿ ಆ ಭೂಮಿ ಸ್ವಾಧೀನಕ್ಕೆ ಒಳಗಾಯಿತು. ಆದರೆ, ಸ್ಮಶಾನಕ್ಕಾಗಿ ಪರ್ಯಾಯ ಭೂಮಿ ಒದಗಿಸುವ ಕೆಲಸ ಅಧಿಕೃತವಾಗಿ ನಡೆಯಲಿಲ್ಲ. ಹೋರಾಟಗಾರರು ಪ್ರಶ್ನಿಸಿದಾಗ ಬೇರೆ ಭೂಮಿಯೊಂದನ್ನು ಬಳಸಿಕೊಳ್ಳಲು ಗುರುತು ಮಾಡಲಾಗಿದ್ದು, ಅದನ್ನು ಸ್ಮಶಾನ ಎಂದು ಘೋಷಿಸಲಾಗಿಲ್ಲ. ಜೊತೆಗೆ ನಾಮಧಾರಿ ಸಮುದಾಯದವರ ಬಳಕೆಗೆ ಅನುಕೂಲವಾಗುವಂತೆ ಆ ಭೂಮಿಯ ಕಾಗದ-ಪತ್ರ ಸಿದ್ಧವಾಗಿಲ್ಲ.
ಅನಾಧಿಕಾಲದಿಂದಲೂ ನಾಮಧಾರಿ ಸಮುದಾಯದವರು ಹೊಂದಿದ್ದ ಸ್ಮಶಾನ ಭೂಮಿಯನ್ನು ಕಸಿದುಕೊಂಡ ನಂತರ ಅವರಿಗೆ ಪರ್ಯಾಯ ಭೂಮಿ ಕೊಡಿಸುವ ಕೆಲಸ ಸರ್ಕಾರದಿಂದ ಆಗಬೇಕಿತ್ತು. ಆದರೆ, ಹೋರಾಟ ನಡೆಸಿದರೂ ಸ್ಮಶಾನ ಭೂಮಿ ಸಿಗದ ಕಾರಣ ಶಿರೂರಿನಲ್ಲಿ ಸಾವನಪ್ಪಿದವರ ಅಂತ್ಯಕ್ರಿಯೆಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ನವಚೈತನ್ಯ ನಾಮಧಾರಿ ಸಂಘದವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಅದರ ಪರಿಣಾಮ ಕಂದಾಯ ಇಲಾಖೆಯೂ ರಸ್ತೆ ಬದಿಯ ಜಾಗವನ್ನು ಸ್ಮಶಾನಕ್ಕಾಗಿ ಮೀಲಸಿಡಲು ಪಂಚನಾಮೆ ನಡೆಸಿದೆ. ಆದರೆ, ಆ ಪ್ರಕ್ರಿಯೆ ಪೂರ್ಣವಾಗುತ್ತಿಲ್ಲ.
ಈ ಎಲ್ಲಾ ಹಿನ್ನಲೆ ಬುಧವಾರ ನವಚೈತನ್ಯ ನಾಮಧಾರಿ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ ಮತ್ತೊಮ್ಮೆ ತಾಲೂಕು ಆಡಳಿತದ ಮೊರೆ ಹೋದರು. ಪದಾಧಿಕಾರಿಗಳಾದ ಅಭಿಷೇಕ ನಾಯ್ಕ, ರಘುನಾಥ ನಾಯ್ಕ ಜೊತೆ ಸದಸ್ಯರಾದ ದಿಲೀಪ ನಾಯ್ಕ, ಸೂರಜ್ ನಾಯ್ಕ, ಅರುಣ ನಾಯ್ಕ ಹಾಗೂ ಮಹಾಬಲೇಶ್ವರ ನಾಯ್ಕ ಅವರ ಜೊತೆ ಮತ್ತೊಮ್ಮೆ ಮನವಿ ಸಲ್ಲಿಸಿದರು. `ಜನರ ಸಮಸ್ಯೆ ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸಿ’ ಎಂದು ಒತ್ತಾಯಿಸಿದರು.
Discussion about this post