ಗಣೇಶ ಹಬ್ಬ ಆಚರಣೆಗೆ ಸರ್ಕಾರ ಹಲವು ಷರತ್ತು ವಿಧಿಸಿದೆ. `ಅನೇಕ ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಾಗಿಲ್ಲ. ಗಣಪನ ವಿಗ್ರಹ 5 ಅಡಿಗಿಂತ ಎತ್ತರವಿರುವಂತಿಲ್ಲ. ಅಲಂಕಾರಕ್ಕೆ ಬಲೂನು ಸಹ ಬಳಸುವ ಹಾಗಿಲ್ಲ’ ಎಂಬುದು ಈ ವರ್ಷದ ಹೊಸ ಷರತ್ತು!
ಗಣೇಶ ಚತುರ್ಥಿಗೆ ಸರ್ಕಾರ ಹಲವು ಷರತ್ತು ವಿಧಿಸುವುದು ಇದೇ ಮೊದಲಲ್ಲ. `ದೊಡ್ಡದಾಗಿ ಧ್ವನಿ ವರ್ಧಕ ಬಳಸುವ ಹಾಗಿಲ್ಲ. ಪ್ಲಾಸ್ಟಿಕ್ ಬಳಕೆ ಮಾಡುವ ಹಾಗಿಲ್ಲ. ರಾತ್ರಿ ವೇಳೆ ಮೈಕ್ ಬಳಸುವ ಹಾಗಿಲ್ಲ. ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಪೊಲೀಸ್ ಅನುಮತಿಪಡೆಯಬೇಕು’ ಎನ್ನುವ ಎಲ್ಲಾ ಷರತ್ತುಗಳನ್ನು ಜನ ಒಪ್ಪಿದ್ದಾರೆ. ಆದರೆ, ಪ್ರತಿ ವರ್ಷ ಅದಕ್ಕೆ ಹೊಸ ಹೊಸ ಷರತ್ತು ಸೇರ್ಪಡೆ ಆಗುತ್ತಿರುವುದಕ್ಕೆ ವಿರೋಧವ್ಯಕ್ತಪಡಿಸುತ್ತಿದ್ದಾರೆ.
`ಗಣಪನ ವಿಗ್ರಹ ತಯಾರಿಸುವಾಗ ಪರಿಸರಕ್ಕೆ ಹಾನಿಯಾಗುವ ವಸ್ತು ಬಳಸುವ ಹಾಗಿಲ್ಲ’ ಎಂಬುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆ. `ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆ ಮಾಡುವ ಹಾಗಿಲ್ಲ. ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಕೆರೆ-ಬಾವಿಗಳಲ್ಲಿ ಮಾಲಿನ್ಯವಾಗುವ ರೀತಿ ವಿಗ್ರಹ ಮುಳುಗಿಸುವಂತಿಲ್ಲ’ ಎನ್ನುವುದು ಹಳೆಯ ಕಾನೂನು.
`ಮೂರ್ತಿ ಪೂಜೆಗೆ ಬಳಸಿದ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಗಣಗಳನ್ನು ಪ್ರತ್ಯೇಕಿಸಬೇಕು. ಪ್ರಸಾದ ಬೋಜನ ವಿತರಣೆಯಲ್ಲಿ ಪ್ಲಾಸ್ಟಿಕ್ ಪ್ಲೇಟ್-ಚಮಚ ನಿಷೇಧಿಸಬೇಕು’ ಎಂಬ ಸೂಚನೆಯೂ ಸರಿ. ಆದರೆ, `ಗಣಪನ ಮೂರ್ತಿ 5 ಅಡಿ ಎತ್ತರಕ್ಕಿಂತ ಜಾಸ್ತಿಯಿರಬಾರದು. ತಿಂಗಳುಗಳ ಕಾಲ ಮೂರ್ತಿ ಸ್ಥಾಪನೆ ಮಾಡಬಾರದು. ಮಂಟಪದ ಅಲಂಕಾರಕ್ಕೆ ಬಲೂನು-ಸ್ಟಿಕ್ ಸಹ ಬಳಸಬಾರದು ಎಂಬು ಈಗಿನ ನಿಯಮ. ಕೆಲವರು ಹರಕೆ ರೂಪದಲ್ಲಿ ಗಣಪನ ವಿಗ್ರಹದ ಎತ್ತರ ಹಾಗೂ ವಿಗ್ರಹ ಸ್ಥಾಪನೆಯ ಅವಧಿ ನಿರ್ಧರಿಸುತ್ತಿರುವುದರಿಂದ ಈ ನಿಯಮ ಜನರ ಭಾವನೆಗೆ ಧಕ್ಕೆ ತರುತ್ತಿದೆ.
ಇದರೊಂದಿಗೆ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬೇಕು. ವಿಗ್ರಹ ತಯಾರಿಸುವ ಗುಡಿಗಾರರು ಹಾಗೂ ಮೂರ್ತಿ ತಯಾರಕರ ಮೇಲೆ ಕಣ್ಣಿಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೂ ಸೂಚನೆ ನೀಡಿದೆ. ಎಲ್ಲಿಯೂ ನಿಯಮ ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ಸರ್ಕಾರ ಸೂಚಿಸಿದೆ.
Discussion about this post