ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರು `ಸುಳ್ಳುಗಾರ ಶಾಸಕ’ ಎಂಬ ಪ್ರಶಸ್ತಿ ಘೋಷಣೆ ಮಾಡಿದ್ದರು. ಇದೀಗ ಭೀಮಣ್ಣ ನಾಯ್ಕ ಅವರ ಆಪ್ತ ಪ್ರಸನ್ನ ಶೆಟ್ಟಿ ಅವರು ಅನಂತಮೂರ್ತಿ ಹೆಗಡೆ ಅವರಿಗೆ `ನಕಲಿ ಹೋರಾಟಗಾರ’ ಎಂಬ ಬಿರುದು ನೀಡಿದ್ದಾರೆ.
ಅನಂತಮೂರ್ತಿ ಹೆಗಡೆ ಅವರು ಮೊದಲು ಮಂಕಾಳು ವೈದ್ಯ ಅವರನ್ನು ಗುರಿಯಾಗಿರಿಸಿಕೊಂಡು ಆರೋಪ ಮಾಡುತ್ತಿದ್ದರು. ಅದಾದ ನಂತರ ಒಂದೆರಡು ಬಾರಿ ಆರ್ ವಿ ದೇಶಪಾಂಡೆ ಅವರ ವಿರುದ್ಧ ಕಿಡಿಕಾರಿದ್ದರು. ಒಮ್ಮೆ ಶಿವರಾಮ ಹೆಬ್ಬಾರ್ ಅವರ ವಿರುದ್ಧವೂ ಮಾತನಾಡಿದ್ದರು. ಆಮೇಲೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಸಿಡಿದೆದ್ದ ಅನಂತಮೂರ್ತಿ ಹೆಗಡೆ ತಮ್ಮ ನಿರಂತರ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಆದರೆ, ಭೀಮಣ್ಣ ನಾಯ್ಕ ಅವರನ್ನು ಒಳಗೊಂಡು ಅನಂತಮೂರ್ತಿ ಹೆಗಡೆ ಅವರ ಆರೋಪಗಳಿಗೆ ಅವರ ಎದುರಾಳಿಗಳು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶಿರಸಿ ಹಾಗೂ ಸುತ್ತಲಿನ ಪ್ರದೇಶದ ಅಭಿವೃದ್ಧಿ ವಿಷಯಗಳ ಬಗ್ಗೆ ಅನಂತಮೂರ್ತಿ ಹೋರಾಟ ನಡೆಸುತ್ತಿದ್ದಾರೆ. ಕೆಲ ಹೋರಾಟಗಳಲ್ಲಿ ಅವರು ಯಶಸ್ಸನ್ನುಪಡೆದಿದ್ದಾರೆ. ಆದರೆ, ಹೋರಾಟಕ್ಕೆ ಅವರು ರಾಜಕೀಯ ಲೇಪನ ಮಾಡುತ್ತಿರುವುದು ಎದುರಾಳಿಗಳ ಸಿಟ್ಟಿಗೆ ಕಾರಣವಾಗಿದೆ. ಜನರ ಸಮಸ್ಯೆ ಅರಿತು ಹೋರಾಟ ಮಾಡುವ ಕಾರಣಕ್ಕೆ ಅನಂತಮೂರ್ತಿ ಹೆಗಡೆ ಅವರಿಗೆ ಜನ ಬೆಂಬಲವೂ ಸಿಕ್ಕಿದೆ. ಆದರೆ, ಅನಂತಮೂರ್ತಿ ಹೆಗಡೆ ಅವರು ತಮ್ಮ ಹೋರಾಟಕ್ಕೆ ರಾಜಕೀಯ ಬಣ್ಣ ಲೇಪಿಸುತ್ತಿರುವ ಕಾರಣ ಅವರ ಜೊತೆ ಮೊದಲ ಹೋರಾಟದಲ್ಲಿದ್ದ ಅನೇಕರು ಇದೀಗ ಅವರ ಬೆನ್ನಿಗಿಲ್ಲ. ಹೊಸದಾಗಿ ಜನ ಬೆಂಬಲಪಡೆಯುತ್ತಿರುವ ಅನಂತಮೂರ್ತಿ ಹೆಗಡೆ ಅವರು ಹಳೆ ಬೆಂಬಲಿಗರನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದು ಇಲ್ಲಿನ ಮುಖ್ಯ ವಿಷಯ.
ಇನ್ನೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸಹ ಹೋರಾಟಗಳಿಂದಲೇ ರಾಜಕೀಯ ಜೀವನ ಶುರು ಮಾಡಿದವರು. ಸಾಕಷ್ಟು ಚುನಾವಣೆಗಳಲ್ಲಿ ಸೋತು ಅದರ ಅನುಭವದ ಆಧಾರದಲ್ಲಿ ಶಿರಸಿ ಶಾಸಕ ಚುನಾವಣೆ ಎದುರಿಸಿದವರು. ಶಾಸಕರಾಗಿ ಆಯ್ಕೆಯಾದ ನಂತರ ಎಲ್ಲಾ ಕಡೆ ಓಡಾಟ ನಡೆಸುತ್ತಿದ್ದಾರೆ. ಆದರೆ, ಜನ ನಿರಿಕ್ಷಿಸಿದ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಭೀಮಣ್ಣ ನಾಯ್ಕ ಅವರಿಂದ ಸಾಧ್ಯವಾಗಿಲ್ಲ ಎಂಬುದು ಸತ್ಯ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ರಸ್ತೆಯಲ್ಲಿ ಬಿದ್ದ ಹೊಂಡ, ಅಶುಚಿತ್ವ ಸೇರಿ ಗಟಾರದಲ್ಲಿ ಹಂದಿ ಸತ್ತು ಬಿದ್ದರೂ ಅದನ್ನು ತೆಗೆಸುವಂತೆ ಶಾಸಕರಿಗೆ ಫೋನ್ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ.
ಶಿರಸಿ ಜನ ಮುಖ್ಯವಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆಗ್ರಹಿಸುತ್ತಿದ್ದಾರೆ. ಉತ್ತಮ ಆಸ್ಪತ್ರೆ ಹಾಗೂ ಯೋಗ್ಯ ರಸ್ತೆ ಇಲ್ಲಿನ ಜನರ ಪ್ರಮುಖ ಬೇಡಿಕೆ. ಅದರ ಈಡೇರಿಕೆಗಾಗಿ ಭೀಮಣ್ಣ ನಾಯ್ಕ ಪ್ರಯತ್ನಿಸಿದರೂ ಸರ್ಕಾರದಿಂದ ಆ ಪ್ರಮಾಣದಲ್ಲಿ ಸಹಕಾರ ಸಿಗುತ್ತಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ವೇಗವಾಗಿ ಸಾಗುತ್ತಿಲ್ಲ. ಸದ್ಯ ಎದುರಾಳಿ ಅನಂತಮೂರ್ತಿ ಹೆಗಡೆ ಅವರಿಗೆ ಇದೇ ವಿಷಯ ಹೋರಾಟದ ಅಸ್ತ್ರವಾಗಿದ್ದು, ರಾಜಕೀಯ ಸಮರಕ್ಕೆ ಕಾರಣವಾಗುತ್ತಿದೆ. ಭೀಮಣ್ಣ ನಾಯ್ಕ ಅವರು ಉತ್ತಮ ಕೆಲಸ ಮಾಡಿದಾಗ ಅನಂತಮೂರ್ತಿ ಹೆಗಡೆ ಅವರೇ ಅವರನ್ನು ಕೊಂಡಾಡಿದನ್ನು ಇಲ್ಲಿ ಅಲ್ಲಗಳೆಯುವ ಹಾಗಿಲ್ಲ.
ಮೊನ್ನೆ ಅನಂತಮೂರ್ತಿ ಹೆಗಡೆ ಅವರು `ಶಿರಸಿಯಲ್ಲಿ 10 ಲಕ್ಷ ಕಿಮೀ ಓಡಿದ ಬಸ್ ಸಂಖ್ಯೆ ಹೆಚ್ಚಿದೆ’ ಎಂಬ ದಾಖಲೆ ಬಿಡುಗಡೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಪ್ರಸನ್ನ ಶೆಟ್ಟಿ ಅವರು `ಗುಜುರಿ ಬಸ್ ಮುಂದುವರೆಸಲು ಬಿಜೆಪಿಯ ಹಿಂದಿನ ಆಡಳಿತ ಅವಧಿಯಲ್ಲಿ ಒಂದು ಬಸ್ ಖರೀದಿ ಮಾಡದಿರುವುದೇ ಕಾರಣ’ ಎಂದಿದ್ದಾರೆ. `ಕಾಂಗ್ರೆಸ್ ಸರ್ಕಾರ ಹೊಸ ಬಸ್ ಖರೀದಿ ಮಾಡಿ, ಹಳೆಯ ಬಸ್ಸುಗಳನ್ನು ಸೇವೆಯಿಂದ ಬಿಡುಗಡೆ ಮಾಡುತ್ತಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಅನಂತಮೂರ್ತಿ ಹೆಗಡೆ ಶಿರಸಿ ಭಾಗದಲ್ಲಿ ಸಾಕಷ್ಟು ರಸ್ತೆ ಹಾಳಾದ ಬಗ್ಗೆ ಹೋರಾಟ ಮಾಡಿದ್ದರು. ಇದಕ್ಕೆ `ರಾಷ್ಟಿಯ ಹೆದ್ದಾರಿ ಹಾಳಾದರೆ ಗುತ್ತಿಗೆದಾರರು ಕಾರಣ. ರಾಜ್ಯ ರಸ್ತೆ ಹಾಳಾದರೆ ಶಾಸಕರು ಕಾರಣ ಎಂಬ ದೋರಣೆಯನ್ನು ಅನಂತಮೂರ್ತಿ ಹೆಗಡೆ ಬಿಡಬೇಕು’ ಎಂದು ಪ್ರಸನ್ನ ಶೆಟ್ಟಿ ಸಲಹೆ ನೀಡಿದ್ದಾರೆ.
ಜೊತೆಗೆ `40 ವರ್ಷಗಳಿಂದ ಜನ ಸೇವೆಯಲ್ಲಿರುವ ಭೀಮಣ್ಣ ನಾಯ್ಕ ಅವರ ಆಡಳಿತ ವೈಖರಿ ಬಗ್ಗೆ ಮಾತನಾಡುವ ಮುನ್ನ ಶಿರಸಿ ನಗರಸಭೆಯಲ್ಲಿ ಬಿಜೆಪಿಗರ ಕಳ್ಳತಮ ಲಂಚಬಾಕತನದ ವಿರುದ್ಧವೂ ಅನಂತಮೂರ್ತಿ ಹೆಗಡೆ ಮಾತನಾಡಬೇಕು. ಅಲ್ಲಿನ ಅಕ್ರಮದಲ್ಲಿ ಅನಂತಮೂರ್ತಿ ಹೆಗಡೆ ಸಹ ಪಾಲುದಾರರು ಎಂಬ ಅನುಮಾನವಿದ್ದು, ಆ ಗೊಂದಲ ಬಗೆಹರಿಸಬೇಕು’ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರೂ ಆಗಿರುವ ಪ್ರಸನ್ನ ಶೆಟ್ಟಿ ಹೇಳಿದ್ದಾರೆ.
Discussion about this post