ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎನ್ ವಾಸರೆ ಅವರು ಪತ್ನಿ ಹೆಸರಿನಲ್ಲಿ ಅಕ್ರಮವಾಗಿ ನಿವೇಶನಪಡೆದ ಆರೋಪ ಎದುರಿಸುತ್ತಿದ್ದಾರೆ. `ನಿವೇಶನ ಖರೀದಿಯಲ್ಲಿ ಅಕ್ರಮ ನಡೆದಿಲ್ಲ’ ಎಂದು ಬಿ ಎನ್ ವಾಸರೆ ಸ್ಪಷ್ಟನೆ ನೀಡಿದ್ದಾರೆ.
`ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಬೆಲೆ ಬಾಳುವ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ನಗರಸಭೆ ಷರತ್ತುಗಳನ್ನು ಮೀರಿ ಕಸಾಪ ಅಧ್ಯಕ್ಷರಾಗಿರುವ ಪತ್ರಕರ್ತ ಬಿ ಎನ್ ವಾಸರೆ ಸಹ ತಮ್ಮ ಪ್ರಭಾವದಿಂದ ನಿಯಮಬಾಹಿರವಾಗಿ ಪತ್ನಿ ಹೆಸರಿಗೆ ಆ ನಿವೇಶನಪಡೆದಿದ್ದಾರೆ’ ಎಂಬುದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಮ ಖಾನ್ ಅವರ ಆರೋಪ. `ಈ ಹಿನ್ನಲೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಬಿ ಎನ್ ವಾಸರೆ ರಾಜೀನಾಮೆ ಕೊಡಬೇಕು’ ಎಂಬುದು ಅಕ್ರಮ ಖಾನ್ ಅವರ ಒತ್ತಾಯ. `2018ರಲ್ಲಿ ನಿವೇಶನ ಖರೀದಿಯಾಗಿದ್ದು ಆ ವೇಳೆ ತಾನು ಕಸಾಪ ಅಧ್ಯಕ್ಷನಾಗಿರಲಿಲ್ಲ. ಜೊತೆಗೆ ಆ ನಿವೇಶನ ನಗರಸಭೆಯಿಂದ ಖರೀದಿಸಿದ ನಿವೇಶನ ಅಲ್ಲ. ಈ ಬಗ್ಗೆ ತನಿಖೆ ನಡೆದರೂ ಎದುರಿಸಲು ಸಿದ್ಧ’ ಎಂದು ಬಿ ಎನ್ ವಾಸರೆ ಅವರ ಮಾತು.
`ಆಶ್ರಯ ಯೋಜನೆಯ ನಿವೇಶನಗಳ ದುರುಪಯೋಗ ನಡೆದಿದೆ. 15 ವರ್ಷ ಪರಬಾರೆ ಮಾಡಬಾರದು ಎಂಬ ನಿಯಮವಿದ್ದರೂ ಅದರ ಉಲ್ಲಂಘನೆಯಾಗಿದೆ. ದಾಂಡೇಲಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭೂ ಅಕ್ರಮ ನಡೆದಿದ್ದು ಅದೆಲ್ಲದರ ಬಗ್ಗೆ ತನಿಖೆ ನಡೆಯಬೇಕು’ ಎಂದು ಅಕ್ರಮ ಖಾನ್ ಆಗ್ರಹಿಸಿದ್ದಾರೆ. `ನಗರಸಭೆಯ 200 ಎಕರೆ ಪ್ರದೇಶದ 792 ನಿವೇಶನಗಳನ್ನು 1962ರಿಂದ 99 ವರ್ಷಗಳ ಅವಧಿಗೆ ಲೀಸ್ ನೀಡಲಾಗಿತ್ತು. ಆ ಪೈಕಿ 745 ನಿವೇಶನ ಬಳಕೆಯಲ್ಲಿದ್ದು, 47 ನಿವೇಶಗಳನ್ನು ನಗರಸಭೆ ವಶಕ್ಕೆಪಡೆದು ಹರಾಜು ಹಾಕಿದ್ದು, ಆ ವೇಳೆ ಪ್ರಭಾವಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂಬುದು ಅಕ್ರಮ ಖಾನ್ ಅವರ ದೂರು.
`ನನ್ನ ವಿರುದ್ಧ ಆರೋಪ ಮಾಡುತ್ತಿದ್ದವರು ಈ ಮೊದಲು ನನ್ನ ವಿರುದ್ಧ ಕಸಾಪ ಚುನಾವಣೆಯಲ್ಲಿ ಸೋತಿದ್ದಾರೆ. ಸದ್ಯ ಮತ್ತೊಮ್ಮೆ ಚುನಾವಣೆ ಸಮೀಪಿಸುತ್ತಿರುವುದರಿಂದ ಇಲ್ಲಸಲ್ಲದ ಗುಲ್ಲು ಹಬ್ಬಿಸಿದ್ದಾರೆ. ಆರೋಪ ಮಾಡಿದವರು ಹಾಗೂ ಅವರ ಜೊತೆಗಿದ್ದವರ ವಿರುದ್ಧ ಅನೇಕ ದೂರುಗಳಿವೆ. ಚೆಕ್ ಬೌನ್ಸ, ಗಾಂಜಾ ಪ್ರಕರಣ, ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರಿಗೆ ನನ್ನ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಅಧಿಕಾರದ ಆಸೆಗಾಗಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ’ ಎಂದು ಬಿ ಎನ್ ವಾಸರೆ ಹೇಳಿದ್ದಾರೆ.
Discussion about this post