ಅಂಕೋಲಾ ತಾಲೂಕಿನ ಹಿಲ್ಲೂರು ಭಾಗದ ರಸ್ತೆ ತೀರಾ ಹದಗೆಟ್ಟಿದ್ದು, ಅದನ್ನು ಕೂಡಲೇ ರಿಪೇರಿ ಮಾಡುವಂತೆ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ. ರಸ್ತೆ ದುರಸ್ಥಿ ನಂತರ ಅದರ ದಾಖಲೆಗಳನ್ನು ಒದಗಿಸುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅಂಕೋಲಾ ತಾಲೂಕಿನ ಮಾರಾಕಲ್ ಹಾಗೂ ಹಿಲ್ಲೂರು ಭಾಗದ ರಸ್ತೆ ಸಂಪೂರ್ಣವಾಗಿ ಹಾಳಾದ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ದೂರು ಸಲ್ಲಿಸಿದ್ದರು. ರಸ್ತೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿದ್ದರು. ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿರುವ ದಿವ್ಯಶ್ರೀ ಎಂ ಅವರು ಈ ಬಗ್ಗೆ ವಿಚಾರಣೆ ನಡೆಸಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
`ರಸ್ತೆ ಹಾಳಾದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ರಸ್ತೆಯಲ್ಲಿ ನೂರಾರು ಗುಂಡಿ ಬಿದ್ದಿರುವುದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ರಸ್ತೆ ರಿಪೇರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ದೂರಿದ್ದರು. ಜುಲೈ 31ರಂದು ರವಾನಿಸಿದ ದೂರು ಅಗಷ್ಟ 2ರಂದು ನ್ಯಾಯಾಧೀಶರ ಕೈ ಸೇರಿದ್ದು, ಅಗಷ್ಟ 30ರ ಒಳಗೆ ಕ್ರಮ ಜರುಗಿಸಿ ವರದಿ ನೀಡುವಂತೆ ಅವರು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.
ಜನಸಾಮಾನ್ಯರ ಅರ್ಜಿಗೆ ನ್ಯಾಯಾಧೀಶರು ತ್ವರಿತ ರೀತಿಯಲ್ಲಿ ಸ್ಪಂದಿಸಿದ ಕಾರಣ ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಸಂತಸವ್ಯಕ್ತಪಡಿಸಿದರು.
Discussion about this post