ಲೈಕು-ಶೇರು-ಕಾಮೆಂಟಿಗಾಗಿ ಜೋಗ ಜಲಪಾತದ ಅಪಾಯಕಾರಿ ಸ್ಥಳಕ್ಕೆ ತೆರಳಿ ವಿಡಿಯೋ ಮಾಡಿದ ಯೂಟೂಬರ್ ವಿರುದ್ಧ ಸಿದ್ದಾಪುರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಯೂಟೂಬರ್’ನನ್ನು ಆ ಸ್ಥಳಕ್ಕೆ ಕರೆದೊಯ್ದ ಸಾಗರದ ಪ್ರವಾಸಿ ಮಾರ್ಗದರ್ಶಿ ವಿರುದ್ಧವೂ ಕೇಸು ದಾಖಲಾಗಿದೆ.
ಬೆಂಗಳೂರಿನ ಯೂಟೂಬರ್ ಗೌಥಮ್ ಅರಸು ಅವರು ಪ್ರವಾಸಿ ಸ್ಥಳಗಳ ವಿಡಿಯೋ ಮಾಡುವ ಯೂಟೂಬರ್ ಆಗಿದ್ದಾರೆ. ಸಾಗರದ ಸಿದ್ಧರಾಜು ಅವರ ಜೊತೆ ಗೌಥಮ್ ಅರಸು ಅವರು ಮೂರು ದಿನದ ಹಿಂದೆ ಸಿದ್ದಾಪುರಕ್ಕೆ ಬಂದಿದ್ದು ಅಲ್ಲಿಂದ ಜೋಗ ಜಲಪಾತಕ್ಕೆ ಹೋಗಿದ್ದರು. ಧಾರಾಕಾರ ಮಳೆ, ಜಾರುವ ಕಲ್ಪಂಡೆಗಳ ಬಗ್ಗೆ ಅರಿವಿದ್ದರು ಅವರು ಅಪಾಯಕಾರಿ ಸ್ಥಳಗಳಿಗೆ ಹೋಗಿದ್ದರು.
ಅತ್ಯಂತ ಅಪಾಯಕಾರಿಯಾದ ರಾಜಾ ಕಲ್ಬಂಡೆ ಮೇಲೆ ಅವರು ಸರ್ಕಸ್ ಮಾಡಿ ವಿಡಿಯೋ ಮಾಡಿದ್ದರು. ಅಲ್ಲಿ ತೆರಳದಂತೆ ಸೂಚನೆಗಳಿದ್ದರೂ ಅದನ್ನು ಉಲ್ಲಂಘಿಸಿದ್ದರು. `ಸಾಯೊದರೊಳಗೆ ಒಮ್ಮೆ ನೋಡು ಜೋಗದ ಗುಂಡಿ’ ಎನ್ನುತ್ತ ಅವರು ತಾವಿದ್ದ ಅಪಾಯಕಾರಿ ದೃಶ್ಯಾವಳಿಗಳ ಚಿತ್ರಣ ಮಾಡಿದ್ದು, ಅದನ್ನು ಯೂಟೂಬ್’ಗೆ ಹಾಕಿದ್ದರು. `ಗೌಥಮ ಅವರು ಗುಂಡಿ ನೋಡಿ ಏನು ಹೇಳುತ್ತಾರೆ?’ ಎಂಬ ಸಿದ್ಧರಾಜು ಅವರ ಧ್ವನಿ ಸಹ ಯೂಟೂಬಿನಲ್ಲಿ ಸೆರೆಯಾಗಿದ್ದು, ಸಿದ್ಧರಾಜು ಅವರು ಅಪಾಯಕಾರಿ ಸ್ಥಳದಲ್ಲಿರುವುದು ವಿಡಿಯೋದಲ್ಲಿ ಕಾಣಿಸಿತ್ತು.
3 ದಿನದಲ್ಲಿ ಈ ವಿಡಿಯೋ 15 ಸಾವಿರ ವೀಕ್ಷಣೆ ಕಂಡಿದ್ದು ಅಗಸ್ಟ 7ರಂದು ಸಿದ್ದಾಪುರ ತಾಲೂಕು ವ್ಯಾಪ್ತಿಗೆ ಬರುವ ಜೋಗ ಮೇಲ್ಬಾಗ ಈ ವಿಡಿಯೋ ಚಿತ್ರಿಕರಣವಾಗಿರುವುದನ್ನು ಪೊಲೀಸ್ ಇಲಾಖೆಯ ಸೋಶಿಯಲ್ ಮಿಡಿಯಾ ಮಾನಿಟಿರಿಂಗ್ ಸೆಲ್ ಸಿಬ್ಬಂದಿ ನೋಡಿದರು. `ಈ ವಿಡಿಯೋ ನೋಡಿ ಇನ್ನಷ್ಟು ಜನ ಅಪಾಯಕಾರಿ ಜಾಗಕ್ಕೆ ತೆರಳುವ ಸಾಧ್ಯತೆಯಿದೆ’ ಎಂದವರು ಸಿದ್ದಾಪುರ ಪಿಎಸ್‌ಐ ಶಾಂತಿನಾಥ ಪಾಸಾನೆ ಅವರಿಗೆ ವರದಿ ಸಲ್ಲಿಸಿದರು.
ಸೂಚನಾ ಫಲಕ ಹಾಗೂ ಎಚ್ಚರಿಕೆ ಮೀರಿ ಅಪಾಯ ಸ್ಥಳಕ್ಕೆ ಹೋಗಿದ್ದ ಯೂಟೂಬರ್ ವಿರುದ್ಧ ಪಿಎಸ್‌ಐ ಶಾಂತಿನಾಥ ಪಾಸಾನೆ ಸಿಡಿಮಿಡಿಗೊಂಡರು. ಅವರಿಗೆ ಕಾನೂನು ಪಾಠ ಕಲಿಸುವ ಉದ್ದೇಶದಿಂದ ಯೂಟೂಬರ್ ಗೌಥಮ್ ಅರಸು ಹಾಗೂ ಗೈಡ್ ಸಿದ್ಧರಾಜು ವಿರುದ್ಧ ಪ್ರಕರಣ ದಾಖಲಿಸಿದರು. `ವೈಯಕ್ತಿಕ ಸುರಕ್ಷತೆಗೆ ಆದ್ಯತೆಕೊಡದೇ ಮಾನವನ ಜೀವನಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ವರ್ತಿಸಿದ ಕಾರಣ ಕಾನೂನು ಕ್ರಮ ಜರುಗಿಸಿರುವೆ’ ಎಂದವರು ಮೇಲಧಿಕಾರಿಗಳಿಗೆ ಮನವರಿಕೆ ಮಾಡಿದರು.
Discussion about this post