ಮುಂಡಗೋಡಿನ ಕೃಷ್ಣಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಗೆ ಭೂಮಿ ದಾನ ಮಾಡಿದ್ದರು. ಆದರೆ, ಆ ಭೂಮಿಯಲ್ಲಿ ಇದೀಗ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಇದರಿಂದ ಅವರು ಕಂಗಾಲಾಗಿದ್ದಾರೆ. ಸಾರ್ವಜನಿಕ ಉಪಯೋಗಕ್ಕೆ ನೀಡಿದ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳದ ಸರ್ಕಾರದ ವಿರುದ್ಧ ಅವರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಮಳಗಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಕೃಷ್ಣಮೂರ್ತಿ ಕಲ್ಗೂರು ಅವರು ತಮ್ಮ ಭೂಮಿ ಬಿಟ್ಟು ಕೊಟ್ಟಿದ್ದರು. ಅಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೂ ವ್ಯವಸ್ಥೆ ಮಾತ್ರ ಸರಿಯಾಗಿರಲಿಲ್ಲ. ಇದರಿಂದ ಆ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಯಿತು. ಇದರಿಂದ ಬೇಸತ್ತ ಕೃಷ್ಣಮೂರ್ತಿ ಅವರು ಆ ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.
15 ವರ್ಷಗಳ ಹಿಂದೆ ಕೃಷ್ಣಮೂರ್ತಿ ಕಲ್ಗೂರು ಅವರು 30 ಗುಂಟೆ ಭೂಮಿಯನ್ನು ಸರ್ಕಾರಕ್ಕೆ ಕೊಟ್ಟಿದ್ದರು. `ಸಾರ್ವಜನಿಕ ಸೇವೆಗೆ ತಮ್ಮ ಭೂಮಿ ಸಿಗಲಿ’ ಎಂಬ ಬಯಕೆಯಿಂದ ಅವರು ಯಾವುದೇ ನಿರೀಕ್ಷೆಯಿಲ್ಲದೇ ಭೂ ದಾನ ಮಾಡಿದ್ದರು. ಅವರ ಆ ಕೊಡುಗೆಯ ಪರಿಣಾಮ ಮಳಗಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಯಿತು. ಸುಸಜ್ಜಿತ ಕಟ್ಟಡವನ್ನು ಕಟ್ಟಲಾಯಿತು. ಆದರೆ, ಕ್ರಮೇಣ ಅಲ್ಲಿ ಸೌಕರ್ಯ ಕೊರತೆ ಶುರುವಾಯಿತು. ಪರಿಣಾಮ ಆ ಕಟ್ಟಡ ಹಾಳು ಬಿದ್ದಿತು.
ಸದ್ಯ ಅಲ್ಲಿ ಬಸ್ ನಿಲುಗಡೆ ಆಗುತ್ತಿಲ್ಲ. ಇದರಿಂದ ಕಟ್ಟಡವೂ ಉಪಯೋಗಕ್ಕೆ ಬರುತ್ತಿಲ್ಲ. ಜಾಗ ಕೊಟ್ಟ ವ್ಯಕ್ತಿಗೂ ಯಾರು ಗೌರವ ಕೊಡುತ್ತಿಲ್ಲ. ಈ ಎಲ್ಲಾ ಹಿನ್ನಲೆ ಕೃಷ್ಣಮೂರ್ತಿ ಅವರು ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ತಮ್ಮ ಆಕ್ರೋಶವ್ಯಕ್ತಪಡಿಸಿದರು.
Discussion about this post