ಜಿಲ್ಲಾಕೇoದ್ರ ಕಾರವಾರದಲ್ಲಿರುವ ಸಖಿ ಕೇಂದ್ರದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ಸಾಕಷ್ಟು ದೂರು ಬರುತ್ತಿದೆ. ನೊಂದವರಿಗೆ ನೆರವು ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಶಿರಸಿಯಲ್ಲಿ ಸಹ ಸಖಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಪೊಲೀಸ್ ಇಲಾಖೆಯ ಮಾಹಿತಿಯಂತೆ, ಜೋಯಿಡಾ. ಹಳಿಯಾಳ, ಮುಂಡಗೋಡ, ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳ ಪೊಲೀಸ್ ಠಾಣೆಗಳಲ್ಲಿ 2022ರಲ್ಲಿ 240 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. 2023ರಲ್ಲಿ 305, 2024ರಲ್ಲಿ 297 ಸಂಖ್ಯೆಯ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
ಕಾರವಾರ ಇನ್ನಿತರ ತಾಲೂಕುಗಳಿಂದ ದೂರವಿರುವ ಕಾರಣ ನೊಂದ ಮಹಿಳೆಯರು ಜಿಲ್ಲಾಕೇಂದ್ರಕ್ಕೆ ಬಂದು ದೂರು ನೀಡಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದನ್ನು ಅರಿತ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಶಿರಸಿಯಲ್ಲಿಯೂ ಸಖಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
`ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿಯನ್ವಯ ಭೌಗೋಳಿಕ ವಿಸ್ತಾರ ಹೊಂದಿರುವ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ದಾಖಲಾಗುವ ಜಿಲ್ಲೆಗಳಲ್ಲಿ ಹೆಚ್ಚುವರಿ ಸಖಿ ಒನ್ ಸ್ಟಾಪ್ ಸೆಂಟರ್ ತೆರೆಯಲು ಅವಕಾಶವಿದೆ. ಜಿಲ್ಲೆಯು ಭೌಗೋಳಿಕವಾಗಿ ವಿಸ್ತೀರ್ಣವಾಗಿರುವುದರಿಂದ ಶಿರಸಿಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೆಚ್ಚುವರಿ ಸಖಿ ಕೇಂದ್ರ ಮಂಜೂರಾತಿ ಅಗತ್ಯ’ ಎಂದವರು ಹೇಳಿದ್ದಾರೆ.
`ಶಿರಸಿಯಲ್ಲಿನ ಸಖಿ ಸದನ ಕೇಂದ್ರದಲ್ಲಿನ ಮಹಿಳೆಯರಿಗೆ ಆರೋಗ್ಯ ಇಲಾಖೆಯ ಮೂಲಕ ಮನಃಶಾಶ್ತçಜ್ಞರಿಂದ ಕೌನ್ಸಲಿಂಗ್ ಆಯೋಜಿಸುವುದರ ಜೊತೆಗೆ ವಕೀಲರಿಂದ ಕಾನೂನು ನೆರವು ಒದಗಿಸಬೇಕು. ಜಿಲ್ಲೆಯಲ್ಲಿನ ಸಖಿ ಮತ್ತು ಸ್ವೀಕಾರ ಕೇಂದ್ರಗಳಲ್ಲಿ ಮಹಿಳೆಯರಿಗೆ ನೆರವಾಗುವ ಮಾಹಿತಿ ಒಳಗೊಂಡ ಪುಸ್ತಕಗಳ ಸಂಗ್ರಹಾಲಯ ವ್ಯವಸ್ಥೆ ಮಾಡಬೇಕು’ ಎಂದು ಅವರು ಸೂಚಿಸಿದ್ದಾರೆ.
`ಶಿರಸಿ ಮತ್ತು ಅಂಕೋಲದಲ್ಲಿ ಸಖಿ ನಿವಾಸ ಇದ್ದು, ಕಾರವಾರದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ವಸತಿ ಸೌಕರ್ಯ ವಸತಿ ನಿಲಯ ತೆರೆಯಬೇಕು. ಇದಕ್ಕೆ ಖಾಸಗಿ ಸಂಸ್ಥೆಗಳು ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆಯಿರುವ ಕಟ್ಟಡ ಲಭ್ಯವಿರುವ ಬಗ್ಗೆ ಪರಿಶೀಲಿ’ ಎಂದು ಸೂಚಿಸಿದರು.
Discussion about this post