ಅಂಕೋಲಾ ತಾಲೂಕಿನ ಕನಕನಳ್ಳಿ ಶಾಲೆಯಲ್ಲಿ 55 ಮಕ್ಕಳಿದ್ದರೂ ಅದಕ್ಕೆ ಅನುಗುಣವಾಗಿ ಶಿಕ್ಷಕರಿಲ್ಲ. ಈ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗದ ಹಿನ್ನಲೆ ಮಕ್ಕಳು ಶಾಲೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಶಿಕ್ಷಣ ಕಲಿಕೆಗೆ ಅವಕಾಶವಿದೆ. ಸದ್ಯ ಇಲ್ಲಿ 55 ವಿದ್ಯಾರ್ಥಿಗಳು ಓದುತ್ತಿದ್ದು, ಮೂವರು ಶಿಕ್ಷಕರಿದ್ದಾರೆ. ಇಲ್ಲಿ ಕಲಿಯುವ ಅನೇಕ ಮಕ್ಕಳು ಬಡವರಾಗಿದ್ದರೂ ಪ್ರತಿಭಾನ್ವಿತರ ಸಂಖ್ಯೆ ಕಡಿಮೆಯಿಲ್ಲ. ಆದರೆ, ಅವರ ಪ್ರತಿಭೆ ಅನ್ವೇಷಣೆಗಾಗಿ ಅಗತ್ಯ ಶಿಕ್ಷಕರ ನೇಮಕಾತಿ ನಡೆದಿಲ್ಲ ಎಂಬುದು ಜನರ ದೂರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಈ ಶಾಲೆಯ ಮಕ್ಕಳು ಸಾಧನೆ ಮಾಡುತ್ತ ಬಂದಿದ್ದಾರೆ. ಆದರೆ, ಶಾಲೆಯಲ್ಲಿರುವ ಶಿಕ್ಷಕರ ಕೊರತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಡ್ಡಿಯಾಗಿದೆ. 2023ರಲ್ಲಿ ಶಿಕ್ಷಕರೊಬ್ಬರು ವರ್ಗವಾಗಿದ್ದು, ಅವರ ಸ್ಥಾನಕ್ಕೆ ಹೊಸ ಶಿಕ್ಷಕರ ನೇಮಕಾತಿ ಆಗಿಲ್ಲ. ಮೂವರು ಶಿಕ್ಷಕರಿಂದ 7ನೇ ತರಗತಿಯವರೆಗೆ ಪಾಠ ಮಾಡಲು ಆಗುತ್ತಿಲ್ಲ.
`ನಮ್ಮ ಶಾಲೆಗೆ ಶಿಕ್ಷಕರನ್ನು ಕೊಡಿ’ ಎಂದು ಶಾಲಾ ಅಭಿವೃದ್ಧಿ ಸಮಿತಿಯವರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. `ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಿಸಿಯೂಟ, ಹಾಲು-ಹಣ್ಣು ಕೊಡಲಾಗುತ್ತದೆ. ಆದರೆ, ಅಗತ್ಯವಿರುವ ಶಿಕ್ಷಕರನ್ನು ಮಾತ್ರ ಕೊಡಲಾಗುತ್ತಿಲ್ಲ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಗಾಂವ್ಕರ್ ಅಸಮಧಾನವ್ಯಕ್ತಪಡಿಸಿದರು.
`ಮುಂದಿನ ಸೋಮವಾರದ ಒಳಗೆ ಶಿಕ್ಷಕರ ನೇಮಕಾತಿಗೆ ಕ್ರಮ ಆಗದೇ ಇದ್ದರೆ ಮರುದಿನದಿಂದಲೇ ಎಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರಲು ನಿರ್ಣಯಿಸಲಾಗಿದೆ. ಸ್ವಾತಂತ್ರೋತ್ಸವವನ್ನು ಮಕ್ಕಳು ಅವರವರ ಮನೆಯಲ್ಲಿಯೇ ಆಚರಿಸಲಿದ್ದಾರೆ’ ಎಂದವರು ತಿಳಿಸಿದರು.
Discussion about this post