ಮೊನ್ನೆ ತಾನೆ ಅಂಕೋಲಾ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಂಡಿರುವ ಗುರುನಾಥ ಹಾದಿಮನೆ ಅಲ್ಲಿ ನಡೆಯುವ ಮನೆ ಹಾಳು ಮಟ್ಕಾ ಹಾವಳಿ ತಡೆಗೆ ಮುಂದಾಗಿದ್ದಾರೆ. ಒಂದೇ ದಿನ ಎರಡು ಕಡೆ ದಾಳಿ ನಡೆಸಿದ ಅವರು ಮಟ್ಕಾ ಬುಕ್ಕಿಯನ್ನು ಪತ್ತೆ ಹಚ್ಚಿದ್ದಾರೆ.
ಕುಮಟಾದ ಹಿರೆಗುತ್ತಿಯ ಸೂರ್ಯಕಾಂತ ಹರಿಕಂತ್ರ ಅಂಕೋಲಾ ತಾಲೂಕಿನ ಬೆಳಲೆಯ ಪ್ರಮೀಳಾ ವೈನ್ ಮುಂದೆ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಅಗಷ್ಟ 8ರಂದು 1ರೂಪಾಯಿಗೆ 80ರೂ ಎಂದು ಹೇಳಿ ಹಣಪಡೆಯುತ್ತಿದ್ದ ಸೂರ್ಯಕಾಂತ ಅವರನ್ನು ಹಿಡಿದ ಗುರುನಾಥ ಹಾದಿಮನೆ ಅವರ ಬಳಿಯಿದ್ದ 515ರೂ ಹಣವನ್ನು ವಶಕ್ಕೆಪಡೆದಿದ್ದಾರೆ.
ಅದೇ ದಿನ ಬೆಳಲೆ ಗ್ರಾಮದ ಅಂಕೋಲಾ-ಗೋಕರ್ಣ ರಸ್ತೆಬದಿಯ ಮಧು ಕೋಲ್ಡ್ ಡ್ರಿಂಕ್ಸ ಬಳಿ ತರಕಾರಿ ವ್ಯಾಪಾರ ಮಾಡುವ ಬುದವಂತ ಗೌಡ ಸಹ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಅಂಕೋಲಾ ದೇವಿಗದ್ದೆಯ ಬುದುವಂತ ಗೌಡ ಆ ದಿನ ಮಟ್ಕಾದಿಂದಲೇ 1430ರೂ ದುಡಿದಿದ್ದು, ಅದನ್ನು ಪಿಎಸ್‌ಐ ಗುರುನಾಥ ಹಾದಿಮನೆ ಜಪ್ತು ಮಾಡಿದ್ದಾರೆ.
ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಅಂಕೋಲಾದ ಬೆಳಲೆಯ ನಾಗರಾಜ@ ರಾಜು ಕಮಲಾಕರ ನಾಯಕ ಮಟ್ಕಾ ಆಡಿಸುವಂತೆ ಪ್ರೇರೇಪಿಸಿದ ಬಗ್ಗೆ ಹೇಳಿದ್ದಾರೆ. ಹೀಗಾಗಿ ಮಟ್ಕಾ ಆಡಿಸಿದ ಸೂರ್ಯಕಾಂತ ಹರಿಕಂತ್ರ ಹಾಗೂ ಬುದುವಂತ ಗೌಡರ ಜೊತೆ ಮಟ್ಕಾಬುಕ್ಕಿ ರಾಜು ನಾಯಕ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಕೋಲಾದಲ್ಲಿ ಇನ್ನೂ ಅನೇಕ ಮಟ್ಕಾ ಬುಕ್ಕಿಗಳಿದ್ದು, ಅವರು ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ಹಲವು ಗೂಡಂಗಡಿ ಹಾಗೂ ಇನ್ನಿತರ ಕಡೆ ರಾಜಾರೋಷವಾಗಿ ಮಟ್ಕಾ ನಡೆಯುತ್ತಿದೆ. ಇದರಿಂದ ಅನೇಕ ಕೂಲಿ ಕಾರ್ಮಿಕರು ಬೀದಿಗೆ ಬಂದಿದ್ದು, ಗೂಡಂಗಡಿಕಾರರನ್ನು ಗುರಿಯಾಗಿರಿಸಿಕೊಳ್ಳುವ ಬದಲು ಮಟ್ಕಾಬುಕ್ಕಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
Discussion about this post