ಮಂಗಳೂರಿನಿoದ ಸಾಂಗ್ಲಿಗೆ ಹೊರಟಿದ್ದ ಗಣೇಶ ಟ್ರಾವಲ್ಸ ಬಸ್ಸನ್ನು ಮುರುಡೇಶ್ವರದ ಬಳಿ ಯಲ್ಲಾಪುರದ ಲಾರಿ ಚಾಲಕ ದೀಪಕ ಹರ್ಟೇಕರ್ ಅಡ್ಡಗಟ್ಟಿದ್ದಾರೆ. ಅದಾದ ನಂತರ ಬಸ್ಸಿನ ಚಾಲಕ ರಾಜೇಶ ಪೂಜಾರಿ ಅವರಿಗೆ ಲಾರಿಯಲ್ಲಿದ್ದ ಲಿವರ್ ಜಾಕಿನಿಂದ ಹೊಡೆದು ಗಾಯ ಮಾಡಿದ್ದಾರೆ.
ಆ ಬಸ್ಸಿನ ಮತ್ತೊಬ್ಬ ಚಾಲಕರಾದ ಉಲ್ಲಾಳದ ಅಶೋಕ ಡಿಸೋಜಾ ನೀಡಿದ ದೂರಿನ ಅನ್ವಯ ಮುರುಡೇಶ್ವರ ಪೊಲೀಸರು ದೀಪಕ ಹರ್ಟೇಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. `ಅಗಸ್ಟ 9ರಂದು ಗಣೇಶ ಟ್ರಾವಲ್ಸನ ಸ್ಲೀಪರ್ ಬಸ್ಸು ಮಂಗಳೂರು ಸಾಂಗ್ಲಿ ಕಡೆ ಸಂಚರಿಸುತ್ತಿತ್ತು. ಈ ಬಸ್ಸನ್ನು ಅಶೋಕ ಡಿಸೋಜಾ ಓಡಿಸುತ್ತಿದ್ದರು. ಅವರಿಗೆ ರಾಜೇಶ ಪೂಜಾರಿ ಸಹಾಯಕ ಚಾಲಕರಾಗಿ ಹಾಗೂ ರಫಿಕ್ ಎಂಬಾತರು ಬಸ್ಸಿನ ಕ್ಲಿನರ್ ಆಗಿದ್ದರು.
ಆ ದಿನ ರಾತ್ರಿ 8ಗಂಟೆಗೆ ಮಂಗಳೂರಿನಿoದ ಹೊರಟ ಬಸ್ಸು 11.45ಕ್ಕೆ ಭಟ್ಕಳ ದಾಟಿ ಮುರುಡೇಶ್ವರ ಬಳಿಯ ಬಂಗಾರಮಕ್ಕಿ ತಲುಪಿತು. ಭಟ್ಕಳ ಕಡೆಯಿಂದ ಬಂದ ಲಾರಿ ಓಡಿಸಿಕೊಂಡು ಬಂದ ದೀಪಕ ಹರ್ಟೇಕರ್ ಸಾಕಷ್ಟು ಬಾರಿ ಹಾರ್ನ ಮಾಡಿದರೂ ಬಸ್ಸಿನವರು ದಾರಿ ಬಿಡಲಿಲ್ಲ. ಇದರಿಂದ ದೀಪಕ ಹರ್ಟೇಕರ್ ಸಿಟ್ಟಾಗಿದ್ದು, ಬಸ್ಸನ್ನು ಅಡ್ಡಹಾಕಿ ನಿಲ್ಲಿಸಿದರು. `ಲಾರಿಗೆ ಸೈಡ್ ಕೊಡಲು ಆಗುವುದಿಲ್ಲವಾ?’ ಎಂದು ಬಸ್ಸಿನ ಚಾಲಕರನ್ನು ಬೈದರು.
`ಜಗಳ ಬೇಡ. ನಮಗೆ ಸಮಯಕ್ಕೆ ಸರಿಯಾಗಿ ಸಾಂಗ್ಲಿ ತಲುಪಲು ಆಗುವುದಿಲ್ಲ’ ಎಂದು ಬಸ್ ಚಾಲಕರು ಹೇಳಿದರೂ ಲಾರಿ ಚಾಲಕ ಕೇಳಲಿಲ್ಲ. ಆಗ, ಮತ್ತೊಬ್ಬ ಬಸ್ ಚಾಲಕ ರಾಜೇಶ ಪೂಜಾರಿ ಬಸ್ಸಿನಿಂದ ಇಳಿದು `ನಾವು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇವೆ’ ಎಂದರು. ಇದರಿಂದ ಸಿಟ್ಟಾದ ದೀಪಕ ಹರ್ಟೇಕರ್ ಲಾರಿಯಲ್ಲಿದ್ದ ಲಿವರ್ ಜಾಕಿನಿಂದ ಹೊಡೆಯುವ ಪ್ರಯತ್ನ ಮಾಡಿದರು. ರಾಜೇಶ ಪೂಜಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೆಂಬಿಡದೇ ಬಂದು ತಲೆಗೆ ಹೊಡೆದು ಬೆದರಿಕೆ ಒಡ್ಡಿದರು.
ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಗಣೇಶ ಟ್ರಾವಲ್ಸಿನ ಅಶೋಕ ಡಿಸೋಜಾ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಸತ್ಯಾಸತ್ಯತೆಯ ಪರಿಶೀಲನೆ ನಡೆಸುತ್ತಿದ್ದಾರೆ.
Discussion about this post