ಕುಮಟಾ ತಹಶೀಲ್ದಾರರ ವರ್ಗಾವಣೆಗೆ ಆಗ್ರಹಿಸಿದ್ದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಇದೀಗ ತಹಶೀಲ್ದಾರ್ ವರ್ಗಾವಣೆಗೆ ವಿರೋಧವ್ಯಕ್ತಪಡಿಸಿದ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
`ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಅವರು ಜನ ಸಾಮಾನ್ಯರ ಕೆಲಸ ಮಾಡಲು ಅಲೆದಾಡಿಸುತ್ತಿದ್ದಾರೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೆಲ್ ರೋಡ್ರಿಗಸ್ ದೂರಿದ್ದರು. `ಈ ತಹಶೀಲ್ದಾರರನ್ನು ವರ್ಗಾಯಿಸಿ’ ಎಂದವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ `ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಮದ್ಯವರ್ತಿಗಳ ನೆರವುಪಡೆಯಬೇಡಿ’ ಎಂದು ಪ್ರಕಟಣೆ ನೀಡಿದ್ದರು. ತಹಶೀಲ್ದಾರ್ ಕಾರ್ಯದ ಬಗ್ಗೆ ಶಾಸಕ ದಿನಕರ ಶೆಟ್ಟಿ ಹಾಗೂ ಬಿಜೆಪಿ ಮಂಡಳ ಅಧ್ಯಕ್ಷ ಕುಮಾರ ಮಾರ್ಕಾಂಡೆ ಮೆಚ್ಚುಗೆಯ ಮಾತನಾಡಿದ್ದರು.
ಈ ವೇಳೆ ಶಾಸಕ ದಿನಕರ ಶೆಟ್ಟಿ `ಯಾವುದೋ ಸಂಸ್ಥೆ ಹೆಸರಿನಲ್ಲಿ ತಹಶೀಲ್ದಾರರ ವರ್ಗಾವಣೆಗೆ ಆಗ್ರಹಿಸುವುದು ಸರಿಯಲ್ಲ. ಕೆಲಸ ಮಾಡುವ ಅಧಿಕಾರಿಗಳನ್ನು ಇಲ್ಲಿಂದ ವರ್ಗಾಯಿಸಿ ಎನ್ನಲು ಇವರು ಯಾರು? ಅವರು ಮಾಡಿದ ಸಮಾಜ ಸೇವೆ ಏನು? ಎಂದು ಪ್ರಶ್ನಿಸಿರುವುದು ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ಇದಕ್ಕೆ ಆಗ್ನೆಲ್ ರೋಡಿಗ್ರಸ್ ಸಿಡಿದೆದ್ದಿದ್ದು, ತಮ್ಮ ಸಂಸ್ಥೆಯ ಸಾಮಾಜಿಕ ಚಟುವಟಿಕೆಯ ಬಗ್ಗೆ ಶಾಸಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
`5 ತಿಂಗಳ ಹಿಂದೆ ನೀಡಿದ ಅರ್ಜಿಗೂ ತಹಶೀಲ್ದಾರ್ ಕಚೇರಿಯಿಂದ ಹಿಂಬರಹ ಬಂದಿಲ್ಲ. ಈ ಬಗ್ಗೆ ಕಂದಾಯ ಸಚಿವರಿಗೆ ದೂರು ನೀಡಿದ ಕಾರಣ ಶಾಸಕರು ಜನಸಾಮಾನ್ಯರ ಸಮಾಜ ಸೇವಾ ಸಂಸ್ಥೆಯ ಕೆಲಸದ ಬಗ್ಗೆ ಪ್ರಶ್ನಿಸಿದ್ದಾರೆ. ಕಳೆದ ಐದು ವರ್ಷಗಳಿಂದ ನಿರ್ಗತಿಕರಿಗೆ ಆಹಾರದ ಕಿಟ್ ವಿತರಣೆ, ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಮೇಲಧಿಕಾರಿಗಳಿಗೆ ದೂರು, ಅನ್ಯಾಯ-ಅಕ್ರಮದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಮನವಿ ಸೇರಿ ಹಲವು ಬಗೆಯ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಭಿಕ್ಷÄಕರಿಗೆ ಸಹ ಆಧಾರ್ ಕಾರ್ಡ ಮಾಡಿಕೊಟ್ಟಿರುವುದು, ಆಸ್ಪತ್ರೆ ಸೇರಿದ ಬಡವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವುದು ಸೇರಿ ಹಲವು ಕೆಲಸ ಮಾಡಲಾಗಿದೆ. ಇದಕ್ಕೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಮೆಚ್ಚುಗೆ ಸೂಚಿಸಿದ್ದಾರೆ’ ಎಂದು ಸಂಸ್ಥೆ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ವಿವರಿಸಿದ್ದಾರೆ.
`ನಾವು ಯಾವುದೇ ಸರ್ಕಾರಿ ಹಣದಿಂದ ಸೇವೆ ಮಾಡುತ್ತಿಲ್ಲ. ಸ್ವಂತ ದುಡಿಮೆಯಿಂದ ಈ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಶಾಸಕರು ತಿಳಿದುಕೊಳ್ಳಬೇಕು. ನಮ್ಮ ಜಿಲ್ಲೆಗೆ ಸಾಕಷ್ಟು ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ, ನಾವು ಅನಗತ್ಯವಾಗಿ ಯಾರ ವಿರುದ್ಧವೂ ಆರೋಪ ಮಾಡಿಲ್ಲ’ ಎಂದು ಹೇಳಿದ್ದಾರೆ. `ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ ವಿರುದ್ಧ ಈ ಹಿಂದೆ ನ್ಯಾಯವಾದಿ ನಾಗರಾಜ ಹೆಗ್ಡೆ ಅವರು ಆರೋಪ ಮಾಡಿದ್ದರು. ಆಗಲೂ ಅವರು ವರ್ಗಾವಣೆಗೆ ಒತ್ತಾಯಿಸಿದ್ದರು’ ಎಂಬ ವಿಷಯವನ್ನು ಉಲ್ಲೇಖಿಸಿದ್ದಾರೆ.
Discussion about this post