ಕಾರವಾರದಿಂದ ಅಂಕೋಲಾಗೆ ಬರುವ ಯಲ್ಲಾಪುರ ಡಿಪೋ ಬಸ್ಸಿನಲ್ಲಿ ಮಹಿಳೆಯೊಬ್ಬರು ತಮ್ಮ ಮೊಬೈಲಿನಲ್ಲಿದ್ದ ಆಧಾರ್ ಕಾರ್ಡ ತೋರಿಸಿದರೂ ಅವರಿಂದ ಹಣಪಡೆದು ಟಿಕೆಟ್ ನೀಡಲಾಗಿದೆ. ಹೀಗಾಗಿ ಶಕ್ತಿ ಯೋಜನೆ ಫಲಾನುಭವಿಗೆ 61ರೂ ನಷ್ಟವಾಗಿದ್ದು, ಯೋಜನೆ ಪ್ರಯೋಜನ ನೀಡಿದ ಸಿಬ್ಬಂದಿ ವಿರುದ್ಧ ಅವರು ದೂರು ನೀಡಿದ್ದಾರೆ.
ಶನಿವಾರ ಸಂಜೆ ಕಾರವಾರದಿಂದ ಹುಬ್ಬಳ್ಳಿಗೆ ಯಲ್ಲಾಪುರ ಡಿಪೋದ ಬಸ್ ಹೊರಟಿತ್ತು. ಅಂಕೋಲಾ, ಯಲ್ಲಾಪುರ, ಕಲಘಟಕಿಯಲ್ಲಿ ಮಾತ್ರ ನಿಲುಗಡೆಗೆ ಅವಕಾಶವಿದ್ದ ಈ ಬಸ್ಸನ್ನು ಬಸವರಾಜ ಚಲಗೇರಿ ಅವರು ಓಡಿಸುತ್ತಿದ್ದರು. ಈ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಬ್ಬರೂ ಬಸವರಾಜ ಚಲಗೇರಿ ಅವರೇ ಆಗಿದ್ದು, ಪ್ರಯಾಣಿಕರು ಬಸ್ಸಿನ ಮೆಟ್ಟಿಲುಗಳ ಮೇಲಿದ್ದಾಗಲೇ ಟಿಕೆಟ್ ನೀಡುತ್ತಿದ್ದರು.
ಅಂಕೋಲಾದ ಮಹಿಳೆಯೊಬ್ಬರು ಕಾರವಾರದಲ್ಲಿ ಈ ಬಸ್ಸು ಹತ್ತಿದರು. ತಮ್ಮ ಮೊಬೈಲಿನಲ್ಲಿದ್ದ ಆಧಾರ್ ಕಾರ್ಡನ್ನು ತೋರಿಸಿ ಟಿಕೆಟ್ ಕೇಳಿದರು. ಆದರೆ, ಚಾಲಕ & ನಿರ್ವಾಹಕ ಬಸವರಾಜ ಚಲಗೇರಿ ಕಾಸು ಕೊಡದೇ ಟಿಕೆಟ್ ನೀಡಲು ಒಪ್ಪಲಿಲ್ಲ. `ನಾನು ಬೇರೆ ಬಸ್ಸುಗಳಲ್ಲಿ ಮೊಬೈಲಿನಲ್ಲಿರುವ ಆಧಾರ್ ಕಾರ್ಡ ತೋರಿಸಿ ಟಿಕೆಟ್‌ಪಡೆದಿದ್ದೇನೆ’ ಎಂದು ಆ ಮಹಿಳೆ ಹೇಳಿದರೂ ಚಾಲಕ ಒಪ್ಪಲಿಲ್ಲ. `ಬಸ್ಸಿನಿಂದ ಕೆಳಗೆ ಇಳಿಯಿರಿ’ ಎಂದು ಚಾಲಕ ದಬಾಯಿಸಿದ್ದರಿಂದ ಮಹಿಳೆ ಇನ್ನಷ್ಟು ಹೆದರಿದರು. ಆಗಲೇ ಸಂಜೆ ಆಗಿದ್ದರಿಂದ ಬೇರೆ ಬಸ್ಸು ಸಹ ಸಕಾಲದಲ್ಲಿ ಸಿಗುವ ಹಾಗಿರಲಿಲ್ಲ. ಹೀಗಾಗಿ ಆ ಮಹಿಳೆ ಅನಿವಾರ್ಯವಾಗಿ ಕಾಸು ಕೊಟ್ಟು ಟಿಕೆಟ್ ಖರೀದಿಸಿದರು.
ಅದಾದ ನಂತರ ಆ ಮಹಿಳೆ ಅಂಕೋಲಾದಲ್ಲಿರುವ ಮಾಧ್ಯಮದವರಿಗೆ ಫೋನ್ ಮಾಡಿ ತಮಗಾದ ಅನ್ಯಾಯದ ಬಗ್ಗೆ ವಿವರಿಸಿದರು. ಮಾಧ್ಯಮ ಪ್ರತಿನಿಧಿ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಆ ಬಸ್ಸು ಅಲ್ಲಿಗೆ ಬಂದಿದ್ದು, `ಮೊಬೈಲಿನಲ್ಲಿರುವ ಆಧಾರ್ ಕಾಣಿಸಿದರೆ ನಿಮ್ಮ ಬಸ್ಸಿನಲ್ಲಿ ಟಿಕೆಟ್ ಕೊಡುವುದಿಲ್ಲವೇ?’ ಎಂದು ಪ್ರಶ್ನಿಸಿದರು. ಆಗ, ಚಾಲಕ & ನಿರ್ವಾಹಕರಾಗಿರುವ ಬಸವರಾಜ ಚಲಗೇರಿ ಅವರು `ಇಲ್ಲ’ ಎಂದು ಉತ್ತರಿಸಿದ್ದನ್ನು ಚಿತ್ರಿಕರಿಸಿಕೊಂಡರು.
`ಮೊಬೈಲಿನಲ್ಲಿ ಆಧಾರ್ ಕಾರ್ಡ ಕಾಣಿಸಿದರೂ ಟಿಕೆಟ್ ಕೊಡಬೇಕು ಎನ್ನುವ ಬಗ್ಗೆ ಎಲ್ಲಾ ಸಾರಿಗೆ ಸಿಬ್ಬಂದಿಗೂ ಅರಿವಿದೆ. ಅದಾಗಿಯೂ, ಮಹಿಳೆಯಿಂದ ಕಾಸುಪಡೆದ ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಕ್ರಮ ಜರುಗಿಸುತ್ತೇವೆ’ ಎಂದು ಯಲ್ಲಾಪುರ ಡಿಪೋ ಮ್ಯಾನೇಜರ್ ಸಂತೋಷ ವರ್ಣೆಕರ್ ಪ್ರತಿಕ್ರಿಯಿಸಿದರು. `ನಿಯಮಗಳ ಪ್ರಕಾರ ಮೊಬೈಲಿನಲ್ಲಿರುವ ಆಧಾರ್ ಕಾರ್ಡ ಸಹ ಮಾನ್ಯ. ಆದರೆ, ಟಿಕೆಟ್‌ಪಡೆದ ನಂತರ ಮೊಬೈಲ್ ಸ್ವಿಚ್‌ಆಫ್ ಆದರೆ ತಪಾಸಣೆ ವೇಳೆ ಸಾರಿಗೆ ಸಿಬ್ಬಂದಿ ಸಮಸ್ಯೆ ಅನುಭವಿಸಿದ ನಿದರ್ಶನಗಳಿವೆ. ಅದಾಗಿಯೂ, ಯಲ್ಲಾಪುರ ಬಸ್ ಡಿಪೋದ ಚಾಲಕನಿಂದ ಮಹಿಳೆಗೆ ಆದ ಅನ್ಯಾಯದ ಬಗ್ಗೆ ಗ್ಯಾರಂಟಿ ಸಭೆಯಲ್ಲಿ ಪ್ರಶ್ನಿಸಲಾಗುತ್ತದೆ’ ಎಂದು ಯಲ್ಲಾಪುರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ತಿಳಿಸಿದರು.
Discussion about this post