ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ 500ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಪ್ರತಿಭಟನಾಕಾರರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ 10,000 ರೂ ಗೌರವಧನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜನವರಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಪರಿಶೀಲಿಸಿ ಭರವಸೆ ನೀಡಿದ್ದರು. ಏಪ್ರಿಲ್ 2025ರಿಂದ ಮಾಸಿಕ ಕನಿಷ್ಠ 10 ಸಾವಿರ ಗೌರವಧನ ನೀಡುವ ಅವರ ಮಾತು ಈಡೇರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.
`ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ 1000ರೂ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದು ಇನ್ನೂ ಜಾರಿಯಾಗಿಲ್ಲ’ ಎಂದು ದೂರಿದರು. `ಆಶಾ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ನಗರ ಕೊಳಚೆ ಪ್ರದೇಶಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ’ ಎಂದು ವಿವರಿಸಿದರು.
`ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಸರಕಾರದಿಂದ ನಿಗದಿತ ಪ್ರೋತ್ಸಾಹಧನ ಸಿಗದ ಪರಿಣಾಮ ಅವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರು ದುಡಿದ ಹಣ ಸೂಕ್ತ ರೀತಿಯಲ್ಲಿ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಪ್ರತಿ ಕಾರ್ಯಕರ್ತೆಗೆ 5,000ರೂ ಮತ್ತು ಕೇಂದ್ರದಿAದ ರೂ.2,000 ನೀಡುವ ಪ್ರೋತ್ಸಾಹಧನ ಬರುತ್ತಿದೆ. ಆದರೆ ಕಳೆದ ಬಜೆಟ್‌ನಲ್ಲಿ 1,000ರೂ ಹೆಚ್ಚಳ ಘೋಷಣೆಯಾಗಿದ್ದರೂ, ಅದು ಕೆಲವೇ ಸದಸ್ಯರಿಗೆ ಮಾತ್ರ ಅನ್ವಯವಾಗಿದೆ. ಹೆರಿಗೆ, ಗರ್ಭಿಣಿಯರ ಆರೈಕೆ, ಲಸಿಕೆ ಸೇವೆಗಳಿಗೂ ಪ್ರೋತ್ಸಾಹಧನ ಸಿಗುತ್ತಿಲ್ಲ’ ಎಂದು ಸಮಸ್ಯೆಗಳ ಬಗ್ಗೆ ಹೇಳಿದರು.
`ಕೆಲಸದ ಮೌಲ್ಯಮಾಪನದ ಹೆಸರಿನಲ್ಲಿ ಆಶಾಗಳ ಜನಸಂಖ್ಯೆ ಮಿತಿಯನ್ನು ಹೆಚ್ಚಿಸುವ ಅವೈಜ್ಞಾನಿಕ ನಿರ್ಧಾರವನ್ನು ಕೈಬಿಡಬೇಕು. ಸುಮಾರು 2000 ಆಶಾ ಸುಗಮಕಾರರನ್ನು ಯಾವುದೇ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿರುವ ಆದೇಶವನ್ನು ಹಿಂಪಡೆಯಬೇಕು. ನಿವೃತ್ತಿ ಹೊಂದಿದ 60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ನೀಡಬೇಕು. ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ 2000 ಹೆಚ್ಚುವರಿ ಗೌರವಧನ ನೀಡಬೇಕು’ ಎಂದು ಆಗ್ರಹಿಸಿ ಧರಣಿಯನ್ನು ಮುಂದುವರೆಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಗಂಗಾಧರ ಬಡಿಗೇರ, ಪದ್ಮಾ ಚಲವಾದಿ, ಶ್ವೇತಾ ಕಪಡ್ಲಿಕರ್, ನಿವೇದಿತಾ ಕೊಳಂಬಕರ್, ಮಹಾಲಕ್ಷ್ಮಿ ನಾಯ್ಕ, ಪ್ರಭಾಮಣಿ, ಶಾರದಾ ಗೌಡ, ರೇಣುಕಾ ಭಂಡಾರಿ, ಭಾರತಿ ಭಟ್ಟ ಪ್ರತಿಭಟನೆಯ ಮುಂದಾಳತ್ವವಹಿಸಿದ್ದರು.
Discussion about this post