ದೇವರ ಜೊತೆ ನೇರ ಸಂಪರ್ಕದಲ್ಲಿರುವುದಾಗಿ ಹೇಳಿಕೊಳ್ಳುತ್ತಿದ್ದ ಹಳಿಯಾಳದ ಮಹಿಳೆಯೊಬ್ಬರು ನಿಗೂಢವಾಗಿ ಕಾಣೆಯಾಗಿದ್ದಾರೆ. `ಪತ್ನಿಯನ್ನು ಹುಡುಕಿಕೊಡಿ’ ಎಂದು ಅವರ ಪತಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ!
ಹಳಿಯಾಳದ ಮಂಗಲವಾಡದಲ್ಲಿ ಹರಿದಾಸ ಗುಂಡಪ್ಕರ್ ಅವರು ವಾಸವಾಗಿದ್ದಾರೆ. ಕೂಲಿ ಕಾರ್ಮಿಕರಾಗಿರುವ ಅವರು ರುಕ್ಮಾ ಗುಂಡಪ್ಕರ್ ಅವರನ್ನು ವರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ರುಕ್ಮಾ ಗುಂಡಪ್ಕರ್ ಅವರ ವರ್ತನೆ ಬದಲಾಗಿದೆ. `ಮೈಮೇಲೆ ದೇವರು ಬರುತ್ತದೆ’ ಎನ್ನುವ ರುಕ್ಮಾ ಗುಂಡಪ್ಕರ್ ಅವರು ಆಗಾಗ ಏಕಾಏಕಿ ಕೂಗಾಟ ಶುರು ಮಾಡುತ್ತಾರೆ. ನಂತರ ಅಸ್ವಸ್ಥರಾಗಿ ಮಲಗಿ ಬಿಡುತ್ತಾರೆ. ದೇವರು ಮೈಮೇಲೆ ಬಂದಾಗ ಕೆಲವೊಮ್ಮೆ ಮನೆ ಬಿಟ್ಟು ಹೋಗುವುದೂ ಇದೆ.
ಮನೆ ಬಿಟ್ಟು ಹೋದರೂ ಕೆಲ ಸಮಯದ ನಂತರ ರುಕ್ಮಾ ಗುಂಡಪ್ಕರ್ ಅವರು ಮರಳಿ ಬರುತ್ತಿದ್ದು, ಮೊನ್ನೆ ಮನೆಯಿಂದ ಹೊರ ಹೋದವರು ಮತ್ತೆ ಬಂದಿಲ್ಲ ಫೆಬ್ರವರಿ 18ರ ಬೆಳಗೆ 5 ಗಂಟೆಗೆ ಮನೆಯಿಂದ ಹೊರ ಹೋಗಿರುವ ರುಕ್ಮಾ ಗುಂಡಪ್ಕರ್ ಅವರು ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಕ್ಕಿಲ್ಲ.
ಪತ್ನಿ ಕಾಣೆಯಾದ ಬಗ್ಗೆ ಹರಿದಾಸ ಗುಂಡಪ್ಕರ್ ಅವರು ದೇವರ ಮೊರೆ ಹೋಗಿದ್ದು, ಅಲ್ಲಿಯೂ ಪರಿಹಾರ ಸಿಗದ ಕಾರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ರುಕ್ಮಾ ಗುಂಡಪ್ಕರ್ ಅವರ ಹುಡುಕಾಟ ಶುರು ಮಾಡಿದ್ದಾರೆ.