ವಿವಿಧ ಸಮಸ್ಯೆಗಳ ಕುರಿತು ಹೋರಾಟ ನಡೆಸುತ್ತಿದ್ದ ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರೇ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ವಿರುದ್ಧ ನಿರಂತರ ಸಂಚು ನಡೆಯುತ್ತಿದೆ ಎಂದ ಅವರು ಅದೇ ಚಿಂತೆಯಲ್ಲಿದ್ದಾರೆ.
ಅನoತಮೂರ್ತಿ ಅವರೇ ಹೇಳಿಕೊಂಡಿರುವ ಹಾಗೇ ಅವರ ವಿರುದ್ಧ ಗಾಂಜಾ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಮಾದಕ ವ್ಯಸನ ಪ್ರಕರಣದಲ್ಲಿ ಅನಂತಮೂರ್ತಿ ಹೆಗಡೆ ಅವರನ್ನು ಜೈಲಿಗೆ ಕಳುಹಿಸುವುದಕ್ಕಾಗಿ ಕೆಲವರು ಕಾಯುತ್ತಿದ್ದಾರೆ. `ಇಂಥ ದೂರು ಬಂದರೆ ಮೊದಲು ಸಮಗ್ರ ವಿಚಾರಣೆ ನಡೆಸಬೇಕು. ಅದಾದ ನಂತರವೇ ಕಾನೂನು ಕ್ರಮ ಜರುಗಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಪೋಲೀಸ್ ಉಪಅಧೀಕ್ಷಕಿ ಗೀತಾ ಪಾಟೀಲ್ ಅವರನ್ನು ಭೇಟಿಯಾಗಿ ತಮ್ಮ ಅಂತರಾಳದ ನೋವನ್ನು ತೋಡಿಕೊಂಡಿದ್ದಾರೆ.
`ಕಳೆದ ವರ್ಷ ತಮ್ಮನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಯಿತು. ಅದಾದ ನಂತರ ರಾತ್ರಿ ವೇಳೆ ಅಡ್ಡಗಟ್ಟಿ ಹೊಡೆಯುವ ಪ್ರಯತ್ನ ನಡೆಯಿತು. ಅದಾದ ನಂತರ ಮಹಿಳೆಯರನ್ನು ಛೂ ಬಿಟ್ಟು ತೇಜೋವಧೆ ಮಾಡುವ ಕೆಲಸ ಶುರುವಾಯಿತು. ಅದೆಲ್ಲದರ ಮುನ್ಸೂಚನೆ ಸಿಕ್ಕಿ ತಪ್ಪಿಸಿಕೊಂಡಿದ್ದು, ಇನ್ನಷ್ಟು ಸಂಚು ನಿರಂತರವಾಗಿ ನಡೆದಿದೆ’ ಎಂದವರು ತಮ್ಮ ಆತಂಕ ತೋಡಿಕೊಂಡಿದ್ದಾರೆ.
`ನಾನು ಯಾವುದೇ ಅಕ್ರಮ ಮಾಡಿಲ್ಲ. ಯಾರಿಗೂ ಅನ್ಯಾಯ ಮಾಡಿಲ್ಲ. ಅದಾಗಿಯೂ, ತಮ್ಮ ವಿರುದ್ಧ ಕುತಂತ್ರ ನಡೆಯುತ್ತಿದ್ದು, ಜೀವ ಹಾಗೂ ಜೀವನ ಎರಡೂ ಅಪಾಯದಲ್ಲಿದೆ. ಹೀಗಾಗಿ ತಮಗೆ ರಕ್ಷಣೆ ಒದಗಿಸಿ’ ಎಂದು ಅನಂತಮೂರ್ತಿ ಹೆಗಡೆ ಪೊಲೀಸರ ಮೊರೆ ಹೋಗಿದ್ದಾರೆ. `ತಮ್ಮ ವಿರುದ್ಧ ಸಂಚು ರೂಪಿಸಿದವರನ್ನು ಪತ್ತೆ ಮಾಡಿ ಬಂಧಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
`ನಾನು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಯಾಗಿದ್ದು, ರಾಜಕೀಯವಾಗಿ ಹಲವಾರು ಬಾರಿ ಜನರ ಪರವಾಗಿ ಹೇಳಿಕೆ ಕೊಟ್ಟಿದ್ದೇನೆ. ಅದೇ ಕಾರಣಕ್ಕೆ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದ್ದು, ಅದಕ್ಕೆ ನ್ಯಾಯಾಲಯ ತಡೆ ಒಡ್ಡಿತು. ಅದಾದ ನಂತರ ರಾತ್ರಿ ವೇಳೆ ಕ್ರಿಕೆಟ್, ಕಬಡ್ಡಿ ಪಂದ್ಯಾವಳಿ ಹೋಗುವಾಗ ದೈಹಿಕ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು. ಅದಾದ ಮೇಲೆ ಜಾತಿ ನಿಂದನೆ, ಮಹಿಳೆಯರಿಂದ ದೂರು ಕೊಡಿಸುವ ಪ್ರಯತ್ನವೂ ನಡೆಯಿತು’ ಎಂಬ ವಿಷಯವನ್ನು ಅವರು ಬಿಚ್ಚಿಟ್ಟಿದ್ದಾರೆ.