ಹಲ್ಲು ನೋವಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಹೋಗಿದ್ದ ಹಣಕೋಣದ ರಾಮ ನಾಯ್ಕ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಬೆಳಗ್ಗೆ 10 ಗಂಟೆಗೆ ಅವರು ಆಸ್ಪತ್ರೆಗೆ ಹೋಗಿದ್ದು, ಮಧ್ಯಾಹ್ನ 1 ಗಂಟೆಗೆ ಮನೆಗೆ ಬರುವಷ್ಟರಲ್ಲಿ ಕೂಡಿಟ್ಟ ಕಾಸು ಕಳ್ಳತನವಾಗಿದೆ.
ಕಾರವಾರದ ಹಣಕೋಣದಲ್ಲಿರುವ ರುಕ್ಮಿಣಿ ಕೃಷ್ಣಾ ನಿವಾಸದಲ್ಲಿ ರಾಮ ಕೃಷ್ಣಾ ನಾಯ್ಕ ಅವರು ವಾಸವಾಗಿದ್ದಾರೆ. ಶಿಕ್ಷಕರಾಗಿದ್ದ ಅವರು ನಿವೃತ್ತಿ ನಂತರ ಆ ಊರಿನಲ್ಲಿಯೇ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಹೀಗಿರುವಾಗ ಜನವರಿ 29ರಂದು ರಾಮ ನಾಯ್ಕ ಅವರ ಪತ್ನಿಗೆ ಅಪಾರ ಪ್ರಮಾಣದಲ್ಲಿ ಹಲ್ಲು ನೋವು ಕಾಣಿಸಿತು. 70 ವರ್ಷದ ಅವರು ತಮ್ಮ ಪತ್ನಿ ಅವರನ್ನು ಕಾರವಾರದ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಕೋಡಿಭಾಗದ ಆಸ್ಪತ್ರೆಗೆ ಹೋಗಿ ಅವರು ಹಲ್ಲು ನೋವಿನ ಔಷಧಿಪಡೆದರು. ಸರತಿ ಸಾಲಿನಲ್ಲಿ ನಿಂತು ವೈದ್ಯರನ್ನು ಭೇಟಿ ಮಾಡುವಷ್ಟರಲ್ಲಿ ಮಧ್ಯಾಹ್ನವಾಗಿದ್ದು, 1 ಗಂಟೆ ಅವಧಿಗೆ ಅವರು ಹಣಕೋಣಕ್ಕೆ ಮರಳಿದರು.
ಈ ವೇಳೆ ರುಕ್ಮಿಣಿ ಕೃಷ್ಣಾ ನಿವಾಸದ ಬಾಗಿಲು ತೆರೆದಿತ್ತು. ಕಾರವಾರಕ್ಕೆ ಹೋಗುವ ಮುನ್ನ ಬಾಗಿಲು ಹಾಕಿದ ನೆನಪು ಮಾಡಿಕೊಂಡ ಕೃಷ್ಣ ನಾಯ್ಕ ಅವರು ಹತ್ತಿರ ಹೋಗಿ ನೋಡಿದಾಗ ಬಾಗಿಲಿನ ಬೀಗ ಒಡೆದಿರುವುದು ಕಾಣಿಸಿತು. ಇಂಟರ್ ಲಾಕ್ ಮುರಿದ ಕಳ್ಳರು ಕೃಷ್ಣ ನಾಯ್ಕ ಅವರ ಮನೆಯೊಳಗೆ ಪ್ರವೇಶಿಸಿ ಅಲ್ಲಿದ್ದ ನಗ-ನಾಣ್ಯ ದೋಚಿದ್ದರು. ಎರಡು ವಾಚು, ದೇವರ ಚಿತ್ರವಿದ್ದ ಲಾಕೇಟು, ಚಿನ್ನ ಲೇಪಿತ ಸ್ಟಾಂಡ್ ಜೊತೆ 15 ಸಾವಿರ ರೂ ಹಣವನ್ನು ಕಳ್ಳರು ದೋಚಿದ್ದರು.
ಒಟ್ಟು ಎರಡುವರೆ ಲಕ್ಷ ರೂ ಮೌಲ್ಯ ನಷ್ಟವಾದ ಕಾರಣ ರಾಮ ನಾಯ್ಕ ಅವರು ಪೊಲೀಸರಿಗೆ ದೂರಿದರು. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ಶುರು ಮಾಡಿದರು.
`ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’