ಯಲ್ಲಾಪುರದ ಬಾಲಕಿಯೊಬ್ಬರನ್ನು ಅಪಹರಿಸಿದ್ದ ಸೋಹೇಬ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಮಹಾರಾಷ್ಟದ ಸೋಹೇಬ್ ಖಾನ್ 2016ರಲ್ಲಿ ಯಲ್ಲಾಪುರಕ್ಕೆ ಆಗಮಿಸಿದ್ದು, ಇಲ್ಲಿನ ಬಾಲಕಿಯೊಬ್ಬರನ್ನು ಅಪಹರಿಸಿದ್ದ. ಆ ವೇಳೆಯಲ್ಲಿಯೇ ಪೊಲೀಸರು ಸೋಹಬ್ ಖಾನ್’ನ ಹೆಡೆಮುರಿ ಕಟ್ಟಿದ್ದರು. ಬಾಲಕಿಯನ್ನು ಪಾಲಕರಿಗೆ ಒಪ್ಪಿಸಿದ್ದರು. ಜೈಲಿಗೆ ಹೋದ ನಂತರ ನ್ಯಾಯಾಲಯದಲ್ಲಿ ಜಾಮೀನುಪಡೆದಿದ್ದ ಸೋಹೇಬ್ ಖಾನ್ ನಂತರ ಇತ್ತ ತಲೆ ಹಾಕಿಯೂ ಮಲಗಿರಲಿಲ್ಲ.
ಜಾಮೀನುಪಡೆದ ನಂತರ ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಸೋಹೇಬ್ ಖಾನ್ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಸಾಕಷ್ಟು ಬಾರಿ ಪೊಲೀಸರು ಆತನ ಮನೆ ಬಾಗಿಲಿಗೆ ಹೋಗಿ ಬಂದಿದ್ದರು. ಆದರೆ, ಆತ ಮಾತ್ರ ಅಲ್ಲಿ ಸಿಕ್ಕಿರಲಿಲ್ಲ. ಆತ ಮುಂಬೈಯಲ್ಲಿ ಅಡಗಿರುವ ಬಗ್ಗೆ ಪಿಐ ಸಿದ್ದಪ್ಪ ಗುಡಿ ಅವರಿಗೆ ಮಾಹಿತಿ ಸಿಕ್ಕಿತು.
ಪೊಲೀಸ್ ಸಿಬ್ಬಂದಿ ಮಹಮದ್ ಶಫಿ ಹಾಗೂ ಗಿರೀಶ ಲಮಾಣಿ ಅವರ ಜೊತೆ ಪಿಐ ಸಿದ್ದಪ್ಪ ಗುಡಿ ಮುಂಬೈ ಕಡೆ ತೆರಳಿದರು. ಅಲ್ಲಿ ಅಡಗಿದ್ದ ಆತನನ್ನು ಉಪಾಯವಾಗಿ ಹೊರಬರುವಂತೆ ಮಾಡಿದರು. ಆತ ಮನೆಯಿಂದ ಹೊರ ಬಂದ ತಕ್ಷಣ ಪೊಲೀಸರು ಬಂಧಿಸಿದರು.
ಸದ್ಯ ಅಪ್ರಾಪ್ತೆಯ ಅಪಹರಣ ಮಾಡಿದ್ದ ಸೋಹೇಬ್ ಖಾನ್’ನನ್ನು ಪೊಲೀಸರು ಮತ್ತೆ ನ್ಯಾಯಾಲಯದ ಮುಂದಿರಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರೆದಿದೆ.
Discussion about this post