ಹಿರಿಯ ನಾಗರಿಕರೊಬ್ಬರು ತಮ್ಮ ನಿವೃತ್ತಿ ಸಮುದಲ್ಲಿ ಸಿಕ್ಕ ಹಣವನ್ನು ಕಾರವಾರದ ಆಶ್ರಯ ಪತ್ತಿನ ಸಹಕಾರ ಸಂಘದಲ್ಲಿ ಠೇವಣಿಯಿರಿಸಿದ್ದು, ಠೇವಣಿ ಹಣ ಮರಳಿಸದ ಸೊಸೈಟಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.
ಕಾರವಾರದ ಕೋಡಿಬಾಗದ ದಿನಕರ ನಾಗಪ್ಪ ನಾಯ್ಕ ಅವರು ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತಿ ನಂತರ ಸಿಕ್ಕ ಹಣವನ್ನು ಕಾರವಾರದ ಆಶ್ರಯ ಪತ್ತಿನ ಸಹಕಾರ ಸಂಘದಲ್ಲಿ ಠೇವಣಿಯಿರಿಸಿದ್ದರು. ಠೇವಣಿ ಅವಧಿ ಮುಗಿದರೂ ಸೊಸೈಟಿ ಹಣ ಮರಳಿಸಿರಲಿಲ್ಲ.
ಹೀಗಾಗಿ ಸೊಸೈಟಿ ವಿರುದ್ಧ ದಿನಕರ ನಾಯ್ಕ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷ ಮಂಜುನಾಥ ಎಂ ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ ಆಶ್ರಯ ಪತ್ತಿನ ಸಹಕಾರಿ ಸಂಘದ ಸೇವಾ ನ್ಯೂನ್ಯತೆ ಗಮನಿಸಿದರು. ಅನುಚಿತ ವ್ಯಾಪಾರ ನೀತಿ ಅನುಸರಿಸಿದ ಕಾರಣ ದಂಡ ವಿಧಿಸಿದರು.
ದಿನಕರ ನಾಯ್ಕರು 3 ಠೇವಣಿಗಳಲ್ಲಿ 4,96,898ರೂಗಳಿರಿಸಿದ್ದು, ವಾರ್ಷಿಕ ಶೇ.9.5 ರ ಬಡ್ಡಿಯೊಂದಿಗೆ ಪಾವತಿಸುವಂತೆ ಆಯೋಗದ ಅಧ್ಯಕ್ಷರು ಆದೇಶಿಸಿದರು. ಜೊತೆಗೆ 20,000 ಗಳ ಪರಿಹಾರವನ್ನು ಮತ್ತು ಪ್ರಕರಣದ ಖರ್ಚು ವೆಚ್ಚಕ್ಕಾಗಿ 5,000 ರೂ ನೀಡಬೇಕು ಎಂದು ಸೂಚಿಸಿದರು. ದೂರುದಾರರ ಪರ ನ್ಯಾಯಾವಾದ ಎನ್ ಎಂ ಮಡಿವಾಳ ವಾದಿಸಿದ್ದರು.
Discussion about this post