ಬೈಕ್ ಸಹ ತೆರಳಲು ಅಸಾಧ್ಯವಾಗಿದ್ದ ಕಾರವಾರದ ಗುಡ್ಡಳ್ಳಿಗೆ ಸುಗಮ ಸಂಚಾರದ ರಸ್ತೆ ಮಾಡಿಕೊಟ್ಟ ಗುತ್ತಿಗೆದಾರ ಕೆಲಸದ ಮೊತ್ತ ಪಾವತಿಗಾಗಿ ಅಲೆದಾಡುತ್ತಿದ್ದಾರೆ. ಕೆಲಸ ಮುಗಿದು ವರ್ಷ ಕಳೆದರೂ ಗುತ್ತಿಗೆದಾರ ವ್ಯಯಿಸಿದ ಹಣ ಸರ್ಕಾರದಿಂದ ಸಿಕ್ಕಿಲ್ಲ!
ಕಾರವಾರ ನಗರ ಪ್ರದೇಶದಲ್ಲಿದ್ದರೂ ಗುಡ್ಡಳ್ಳಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು. ಈ ಊರಿಗೆ ತೆರಳಲು ಯೋಗ್ಯ ರಸ್ತೆ ನಿರ್ಮಿಸಿಕೊಡಿ ಎಂದು ಜನರು ಸರ್ಕಾರದ ಬಳಿ ಅಂಗಲಾಚಿದ್ದರು. ಸಾಕಷ್ಟು ಹೋರಾಟದ ನಂತರ ಕಳೆದ ವರ್ಷ ಗುಡ್ಡಳ್ಳಿಗೆ ರಸ್ತೆ ಮಂಜೂರಿಯಾಯಿತು. ಕಾರವಾರದ ಡಾಲ್ಪಿನ್ ಕಂಪನಿ ಗುತ್ತಿಗೆ ಕೆಲಸವಹಿಸಿಕೊಂಡಿತು.
`ಕಚ್ಚಾ ರಸ್ತೆ ಸುಧಾರಣೆ ಮರುಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ‘ ಎಂಬ ಶೀರ್ಷಿಕೆಯ ಅಡಿ ಈ ರಸ್ತೆ ಅಭಿವೃದ್ಧಿ ಕೆಲಸ ನಡೆಯಿತು. ಶೀರ್ಷಿಕೆಯ ಅಡಿ ಕಾಂಕ್ರೇಟ್ ರಸ್ತೆ ನಿರ್ಮಾಣ ಎಂದಿದ್ದರೂ ಗುತ್ತಿಗೆದಾರರಿಗೆ ಒದಗಿಸಿದ ಅಂದಾಜು ಪತ್ರಿಕೆಯಲ್ಲಿ ಕಾಂಕ್ರೇಟ್ ರಸ್ತೆ ನಿರ್ಮಾಣದ ಪ್ರಸ್ತಾಪವೇ ಇರಲಿಲ್ಲ. ರಸ್ತೆಯ ಮಣ್ಣು ತೆಗೆಯುವುದು ಹಾಗೂ ಕಡಿ ಹಾಕುವ ಬಗ್ಗೆ ಮಾತ್ರ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಲಾಗಿತ್ತು. ರಸ್ತೆ ಕೆಲಸದ ವೇಳೆ ಸಾಕಷ್ಟು ದೊಡ್ಡ ದೊಡ್ಡ ಬಂಡೆಗಲ್ಲುಗಳು ಬಂದರೂ ಅದನ್ನು ಒಡೆದು ಸಿದ್ಧಾರ್ಥ ನಾಯ್ಕ ಅವರು ಗುಡ್ಡಳ್ಳಿಗೆ ರಸ್ತೆ ಮಾಡಿದರು.
ಧಾರಾಕಾರ ಮಳೆ, ಜನರ ಸಮಸ್ಯೆ ಅರಿತ ಗುತ್ತಿಗೆದಾರರು 2ಕಿಮೀ ದೂರದವರೆಗೆ ಸಾಮಗ್ರಿಗಳನ್ನು ಹೊತ್ತು ಸಾಗಿಸಿದರು. ಅದಾದ ನಂತರ ಯಂತ್ರೋಪಕರಣಗಳನ್ನು ಬಳಸಿ ಗುಡ್ಡ ಕೊರೆದು ರಸ್ತೆ ಮಾಡಿದರು. ಸರ್ಕಾರವಹಿಸಿದ ಕಾಮಗಾರಿಯ ಜೊತೆ ಕಲ್ಬಂಡೆಗಳನ್ನು ತೆಗೆಯುವ ಹೆಚ್ಚುವರಿ ಕಾಮಗಾರಿಯನ್ನು ಸಹ ಸಿದ್ಧಾರ್ಥ ನಾಯ್ಕ ನಿರ್ವಹಿಸಿದರು. ಇದರ ಪರಿಣಾಮವಾಗಿ ಗುಡ್ಡಳ್ಳಿಗೆ ಜೀಪ್ ಸಂಚರಿಸುವಷ್ಟರ ಮಟ್ಟಿಗೆ ರಸ್ತೆ ನಿರ್ಮಾಣವಾಯಿತು.
ಕಾರವಾರ ನಗರಸಭೆಯ ಜೀಪ್ ನಿತ್ಯ ಗುಡ್ಡಳ್ಳಿ ಓಡಾಟ ನಡೆಸಿ, ಜನರಿಗೆ ಅನುಕೂಲ ಮಾಡಿಕೊಟ್ಟಿತು. ಈ ವೇಳೆ ನಿರಂತರವಾಗಿ ಸುರಿದ ಮಳೆಗೆ ರಸ್ತೆ ಮೇಲೆ ಹಾಕಲಾಗಿದ್ದ ಜಲ್ಲಿ ಅಕ್ಕ-ಪಕ್ಕ ಕೊಚ್ಚಿ ಹೋಗಿದ್ದು, ಕೆಲವರು ರಸ್ತೆ ಕೆಲಸ ಸರಿ ಆಗಿಲ್ಲ ಎಂದು ಪತ್ರ ಬರೆದರು. ಪರಿಣಾಮವಾಗಿ ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಿದ್ದ 45 ಲಕ್ಷ ರೂ ಬರಲೇ ಇಲ್ಲ. ಟೆಂಡರ್’ನಲ್ಲಿ ನಮೂದಿಸಿದಕ್ಕಿಂತಲೂ ಹೆಚ್ಚಿನ ಕೆಲಸ ಮಾಡಿದರೂ ಅಧಿಕಾರಿಗಳು ಕೆಲಸದ ಮೊತ್ತ ಪಾವತಿಸದೇ ಅಲೆದಾಡಿಸುತ್ತಿದ್ದಾರೆ.
ಗುಡ್ಡಳ್ಳಿ ರಸ್ತೆ ನಿರ್ಮಿಸಿದ ಗುತ್ತಿಗೆದಾರ ಸಿದ್ಧಾರ್ಥ ನಾಯ್ಕ ಅವರು ಕಳೆದ ಒಂದು ವರ್ಷದಿಂದ ತಾವು ಮಾಡಿದ ಕೆಲಸದ ಹಣಕ್ಕಾಗಿ ಓಡಾಟ ನಡೆಸುತ್ತಿದ್ದಾರೆ. ಗುಡ್ಡಳ್ಳಿ ಕೆಲಸಕ್ಕಾಗಿ ದುಡಿದ ಕೂಲಿ ಕಾರ್ಮಿಕರ ವೇತನ, ಯಂತ್ರೋಪಕರಣ ಬಾಡಿಗೆ ಸೇರಿ ಎಲ್ಲಾ ವೆಚ್ಚವನ್ನು ಭರಿಸಿದ ಅವರು ಸರ್ಕಾರಿ ಹಣ ಬಾರದ ಕಾರಣ ತಲೆಬಿಸಿಯಲ್ಲಿದ್ದಾರೆ. ಜನರ ಒಳಿತಿಗಾಗಿ ಸರ್ಕಾರದ ಸೂಚನೆ ಪ್ರಕಾರ ಅಭಿವೃದ್ಧಿ ಕೆಲಸ ಮಾಡಿದರೂ ನಷ್ಟ ಅನುಭವಿಸಿದ ಕಾರಣ ಅವರು ಬೇಸರದಿಂದಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದು, ಈವರೆಗೂ ಅದಕ್ಕೆ ಉತ್ತರ ಬಂದಿಲ್ಲ.
ಇನ್ನೂ, `ಇಲ್ಲಿ ಕೇವಲ ಕಡೀಕರಣ ಆದರೆ ರಸ್ತೆ ಸಮಸ್ಯೆ ಬಗೆಹರಿಯಲ್ಲ. ಶಾಶ್ವತ ರಸ್ತೆಗಾಗಿ ಡಾಂಬರ್ ಅಥವಾ ಸಿಮೆಂಟ್ ರಸ್ತೆ ಮಾಡಬೇಕು’ ಎಂದು ಗುತ್ತಿಗೆದಾರ ಸಿದ್ಧಾರ್ಥ ನಾಯ್ಕ ಮೊದಲೇ ಮನವಿ ಮೂಲಕ ಹೇಳಿದ್ದರು. ಅದಾಗಿಯೂ ಅಧಿಕಾರಿಗಳು ಕಡೀಕರಣಕ್ಕೆ ಮಾತ್ರ ಸೂಚಿಸಿದ್ದು, ರಸ್ತೆಗೆ ಹಾಕಲಾದ ಕಡಿ ಮಳೆಗಾಲದಲ್ಲಿ ಕೊಚ್ಚಿ ಹೋಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ `ರಸ್ತೆ ಕಾಮಗಾರಿ ಕುರಿತು ಜಿಲ್ಲಾಧಿಕಾರಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಈ ವಿಚಾರಣೆ ಇನ್ನೂ ಶುರುವೇ ಆಗಿಲ್ಲ’ ಎಂಬುದು ಗುತ್ತಿಗೆದಾರರ ಅಳಲು.
Discussion about this post