`ಅಂಕೋಲಾ ತಾಲೂಕಿನ ಹಾರವಾಡ ರೈಲ್ವೆ ನಿಲ್ದಾಣದಿಂದ ಅನೇಕರು ಮಣಿಪಾಲ ಹಾಗೂ ಮಂಗಳೂರಿಗೆ ಹೋಗುತ್ತಿದ್ದು, ಬೇರೆ ಬೇರೆ ಜಿಲ್ಲೆಗಳಿಂದಲೂ ಹಾರವಾಡಕ್ಕೆ ನಾಟಿ ಔಷಧಿಪಡೆಯಲು ಬರುತ್ತಾರೆ. ಹೀಗಾಗಿ ಇಲ್ಲಿನ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ಮೇಲ್ದರ್ಜೆಗೇರಿಸಬೇಕು’ ಎಂದು ಜನಶಕ್ತಿ ವೇದಿಕೆ ಆಗ್ರಹಿಸಿದೆ.
`ಹಿರಿಯ ಜಾನಪದ ಕಲಾವಿದರಾಗಿದ್ದ ಪದ್ಮಶ್ರೀ ಸುಕ್ರಿ ಗೌಡ ಹಾಗೂ ತುಳಸಿ ಗೌಡ ನೇತೃತ್ವದಲ್ಲಿ ರೈಲ್ವೆ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆದಿತ್ತು. ಅದಾಗಿಯೂ, ಹಾರವಾಡ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ಮೇಲ್ದರ್ಜೆಗೇರಿಸುವ ಕಾರ್ಯವಾಗಿಲ್ಲ’ ಎಂದು ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರಿಗೆ ಮನವರಿಕೆ ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆ ಬಗ್ಗೆ ಚರ್ಚಿಸಲು ಉತ್ತರ ಕನ್ನಡ ಜಿಲ್ಲೆಗೆ ಬರುವುದಾಗಿ ಸೋಮಣ್ಣ ಅವರು ಈ ವೇಳೆ ಭರವಸೆ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ರೈಲ್ವೆ ಸಮಸ್ಯೆಗಳ ನಿವಾರಣೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ರೈಲ್ವೆ ಯೋಜನೆಗಳ ಕೊಡುಗೆಗಳ ಕುರಿತು ಸಮಾಲೋಚಿಸಲು ಒಂದು ದಿನದ ಕಾರ್ಯಗಾರ ನಡೆಸಲು ವಿ ಸೋಮಣ್ಣ ಅವರು ಸಮ್ಮತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಜನಶಕ್ತಿ ವೇದಿಕೆಯವರು ಸೋಮಣ್ಣ ಅವರನ್ನು ಭೇಟಿ ಮಾಡಿದ್ದು, ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆ ಕುರಿತು ಮಾತನಾಡಿದರು. `ಉತ್ತರಕನ್ನಡ ಮತ್ತು ಉತ್ತರಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ರೈಲ್ವೆ ಯೋಜನೆಯಾಗಿದ್ದು, ಬಹು ಬೇಡಿಕೆಯದ್ದಾಗಿದೆ. ದಶಕಗಳೇ ಕಳೆದರೂ ಯೋಜನೆ ಕಾರ್ಯಗತವಾಗದೇ ನೆನೆಗುದಿಗೆ ಬಿದ್ದಿದೆ. ಯೋಜನೆ ಕುರಿತು ಹೋರಾಟಕ್ಕಾಗಿ ಉತ್ತರಕನ್ನಡ ಜಿಲ್ಲಾ ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟ ರಚಿಸಿಕೊಳ್ಳಲಾಗಿದೆ’ ಎಂದು ಮಾಧವ ನಾಯಕ ಅವರು ವಿವರಿಸಿದರು.
`ಈ ಒಕ್ಕೂಟದಿಂದ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಇರುವ ತೊಡಕುಗಳ ಬಗ್ಗೆ ಚರ್ಚಿಸಲು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಈ ರೈಲ್ವೆ ಯೋಜನೆಗಳ ಅವಶ್ಯಕತೆಗಳ ಬಗ್ಗೆ ಸಮಾಲೋಚಿಸಲು ಒಂದು ದಿನದ ಕಾರ್ಯಾಗಾರವನ್ನು ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದರು. ಸುಮಾರು ಮುಕ್ಕಾಲು ಗಂಟೆಗಳ ಕಾಲ ಜಿಲ್ಲೆಯ ಕುರಿತು ಚರ್ಚೆ ನಡೆಸಿದ ಸಚಿವರು `ಖಂಡಿತವಾಗಿ ಕಾರ್ಯಾಗಾರಕ್ಕೆ ಆಗಮಿಸುತ್ತೇನೆ. ಶೀಘ್ರವೇ ದಿನ ತಿಳಿಸುತ್ತೇನೆ’ ಎಂದರು.
Discussion about this post