ಉತ್ತರ ಕನ್ನಡ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ದೀಪನ್ ಎಂ ಎನ್ ಅಧಿಕಾರವಹಿಸಿಕೊಂಡಿದ್ದಾರೆ. ಈ ವೇಳೆ ಅವರು `ಅಕ್ರಮ ಸಹಿಸಲ್ಲ. ಅನ್ಯಾಯಕ್ಕೆ ಅವಕಾಶ ಕೊಡಲ್ಲ’ ಎಂಬ ನಿಟ್ಟಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
`ಅಕ್ರಮ ಮರಳುಗಾರಿಕೆ, ಮಟ್ಕಾ, ಇಸ್ಪಿಟ್ ಕ್ಲಬ್ ಸೇರಿ ಎಲ್ಲಾ ಬಗೆಯ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ತಮ್ಮ ಗುರಿ. ಇದಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸುವೆ’ ಎಂದು ದೀಪನ್ ಎಂ ಎನ್ ಹೇಳಿದರು. ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಲು ಮನೆ ಮನೆಗೂ ಪೊಲೀಸ್ ಎಂಬ ವಿಶೇಷ ಯೋಜನೆ ಕಾರ್ಯಗತಗೊಳಿಸುವುದಾಗಿ ಘೋಷಿಸಿದರು.
`ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿಂದಿನ ಕ್ರಮಗಳೆಲ್ಲವೂ ಮುಂದುವರೆಯಲಿದೆ. ಅಪರಾಧ ಚಟುವಟಿಕೆ ನಿಯಂತ್ರಣದ ಜೊತೆ ನಾಗರಿಕರಿಗೆ ಉತ್ತಮ ಸೇವೆ ನೀಡಲು ಬದ್ಧ’ ಎಂದು ಹೇಳಿದರು. `ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.
`ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳ ನಿಯಂತ್ರಣಕ್ಕೆ ಹೆದ್ದಾರಿ ಪ್ರಾಧಿಕಾರದ ಜೊತೆ ಸಭೆ ನಡೆಸುವೆ. ಅಪಘಾತಗಳ ಸ್ಥಿತಿಗತಿಗಳ ಆಳವಾದ ವಿಶ್ಲೇಷಣೆಯ ನಂತರ ಸೂಕ್ತ ತಾಂತ್ರಿಕ ಹಾಗೂ ಕಾನೂನು ಕ್ರಮ ಜರುಗಿಸುವೆ’ ಎಂಬ ಭರವಸೆ ನೀಡಿದರು. ಗಡಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್‌ಪೋಸ್ಟ್ಗಳ ಕಾರ್ಯಪದ್ಧತಿಯ ಕುರಿತು ಪರಿಶೀಲನೆ ಅಗತ್ಯ. ಸಿಬ್ಬಂದಿ ಸಮಸ್ಯೆ, ಸವಾಲು ಹಾಗೂ ಸೌಲಭ್ಯಗಳ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸುವುದು ತಮ್ಮ ಆದ್ಯತೆ’ ಎಂದರು.
Discussion about this post