ಅಂಕೋಲಾ ತಾಲೂಕಿನ ಹಾರವಾಡ ಹಾಗೂ ಕುಮಟಾದ ಮಿರ್ಜಾನ್ ರೈಲು ನಿಲ್ದಾಣದಲ್ಲಿ ಮೆಮು ರೈಲು ನಿಲುಗಡೆಗೆ ಆಗ್ರಹಿಸಿ ಜನಶಕ್ತಿ ವೇದಿಕೆ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.
ಮಂಗಳೂರು ಸೆಂಟ್ರಲ್‌ನಿoದ ಮಡಗಾಂವ್‌ಗೆ ತೆರಳುವ ರೈಲು ಸಂಖ್ಯೆ: 10107/ 08 ಮೆಮು ಎಕ್ಸ್‌ಪ್ರೆಸ್, 2023ರ ಮೊದಲು ಡೆಮು ರೈಲಾಗಿ ಸಂಚರಿಸುತ್ತಿತ್ತು. ಆ ಸಂದರ್ಭದಲ್ಲಿ ಹಾರವಾಡದಲ್ಲಿ ನಿಲುಗಡೆ ನೀಡಲಾಗುತ್ತಿತ್ತು. ಆದರೆ, ಡೆಮುವನ್ನು ಮೆಮು ಎಕ್ಸ್‌ಪ್ರೆಸ್ ಆಗಿ ಮೇಲ್ದರ್ಜೆಗೇರಿಸಿದ ಬಳಿಕ ಹಾರವಾಡ ನಿಲ್ದಾಣದ ನಿಲುಗಡೆಗೆ ಅವಕಾಶವಿರಲಿಲ್ಲ.
ಈ ಬಗ್ಗೆ ಜನಶಕ್ತಿ ವೇದಿಕೆ ನೇತೃತ್ವದಲ್ಲಿ ಅಂದು ಪದ್ಮಶ್ರೀ ತುಳಸಿ ಗೌಡ ಹಾಗೂ ಸುಕ್ರಿ ಗೌಡ ಹೋರಾಟ ನಡೆಸಿದ್ದರು. ರೈಲ್ವೆ ಹೋರಾಟ ಸಮಿತಿಯ ಜಾರ್ಜ್ ಫರ್ನಾಂಡಿಸ್, ರಾಜೀವ್ ಗಾಂವ್ಕರ್ ಸಂಗಡಿಗರು ಜನಶಕ್ತಿ ವೇದಿಕೆಯ ಮಾಧವ ನಾಯಕ ಅವರ ಹೋರಾಟಕ್ಕೆ ಕೈ ಜೋಡಿಸಿದ್ದರು. ಸತೀಶ್ ಸೈಲ್ ಹಾಗೂ ಬೆಂಬಲಿಗರು ಹಾರವಾಡ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದ್ದರು.
ಮಿರ್ಜಾನ್ ನಿಲ್ದಾಣ ಹೊಸ ನಿಲ್ದಾಣವಾಗಿದ್ದು, ಅಲ್ಲಿಯೂ ಮೆಮುವನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಕೊಂಕಣ ರೈಲ್ವೆ ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿದ್ದು, ಇದೀಗ ಇಂದಿನಿAದ ಮೆಮು ರೈಲು ಹಾರವಾಡ ಮತ್ತು ಮಿರ್ಜಾನ್ ಎರಡೂ ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ.
`ರೈಲ್ವೆ ಹೋರಾಟಗಾರರು ಹಾಗೂ ಸ್ಥಳೀಯರ ಬೇಡಿಕೆಗೆ ಕೊಂಕಣ ರೈಲ್ವೆ ಸ್ಪಂದಿಸಿದ್ದು, ಇದಕ್ಕಾಗಿ ನಿಗಮದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ. ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ, ಕೇಂದ್ರ ರೈಲ್ವೆ ಸಚಿವರಿಗೆ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಸತೀಶ್ ಸೈಲ್ ಸೇರಿದಂತೆ ಪ್ರತ್ಯಕ್ಷ – ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.
ರೈಲ್ವೆ ಹೋರಾಟ ಹೇಗಿತ್ತು? ಆ ದಿನ ವಿಜಯ ಕರ್ನಾಟಕ ಪ್ರಸಾರ ಮಾಡಿದ್ದ ವಿಡಿಯೋ ಇಲ್ಲಿ ನೋಡಿ..
Discussion about this post