`ಶಿರೂರು ಗುಡ್ಡ ಕುಸಿತ ಪ್ರಕರಣದಿಂದ ಸಂತ್ರಸ್ತರಾದವರಿಗೆ 1 ಕೋಟಿ ರೂ ಪರಿಹಾರ ವಿತರಿಸಬೇಕು’ ಎಂದು ಒಂದು ವರ್ಷದಿಂದ ಪ್ರಣವಾನಂದ ಸ್ವಾಮೀಜಿ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅದರ ಮುಂದುವರೆದ ಭಾಗವಾಗಿ `ಅವೈಜ್ಞಾನಿಕ ಕಾಮಗಾರಿ ನಡೆಸಿದ ಐಆರ್‌ಬಿ ಕಂಪನಿ ವಿರುದ್ಧ ಪೊಲೀಸರು ಕ್ರಮ ಜರುಗಿಸಿಲ್ಲ’ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಣವಾನಂದ ಸ್ವಾಮೀಜಿ ಹಾಸಿಗೆ-ದಿಂಬಿನ ಜೊತೆ ಬಂದು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಪ್ರತಿಭಟನೆ ಮಾಡದಂತೆ ಮನವೊಲೈಸಿದರೂ ಸ್ವಾಮೀಜಿ ತಮ್ಮ ಪಟ್ಟು ಬಿಡಲಿಲ್ಲ. `ತಮ್ಮ ಹೋರಾಟದ ಫಲವಾಗಿ ಐ ಆರ್ ಬಿ ಕಂಪನಿ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪೊಲೀಸರು ಈವರೆಗೂ ಒಮ್ಮೆಯೂ ವಿಚಾರಣೆಗೆ ಕರೆದಿಲ್ಲ’ ಎಂದವರು ದೂರಿದರು.
`ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ದೂರುದಾರರು ಆರೋಪಿಗಳ ವಿಚಾರಣೆ ನಡೆಯದೇ ಹೇಗೆ ಬಿ ರಿಪೋರ್ಟ ಸಲ್ಲಿಕೆಯಾಗಿದೆ?’ ಎಂದು ಅವರು ಪ್ರಶ್ನಿಸಿದರು.`ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿದ ಸರ್ಕಾರ ಶಿರೂರು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದೆ. ಕಣ್ಮರೆಯಾದ ಲೊಕೇಶ ನಾಯ್ಕ, ಜಗನ್ನಾಥ ನಾಯ್ಕ ಮೃತದೇಹ ಈವರೆಗೆ ಸಿಕ್ಕಿಲ್ಲ. ಅವರ ಮರಣ ಪ್ರಮಾಣ ಪತ್ರವನ್ನೂ ಕುಟುಂಬದವರಿಗೆ ನೀಡುತ್ತಿಲ್ಲ’ ಎಂದು ದೂರಿದರು.
Discussion about this post