ಯಲ್ಲಾಪುರದ ಪಟ್ಟಣದ ತ್ಯಾಜ್ಯ ತುಂಬಿದ ನೀರು ಸಹಸ್ರಳ್ಳಿ ಕೆರೆ ತಲುಪುತ್ತಿದೆ. ಪಟ್ಟಣ ಪಂಚಾಯತದವರು ಚರಂಡಿ ಸ್ವಚ್ಚಗೊಳಿಸದ ಕಾರಣ ಕೆರೆಯೂ ಅಶುದ್ಧಗೊಂಡಿದೆ.
ಕೆರೆ ಸೇರುವ ಮುನ್ನ ಈ ನೀರು ರಸ್ತೆ ಮೇಲೆ ಚಲಿಸುತ್ತಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಜೋರಾಗಿ ವಾಹನ ಬಂದಾಗ ಶಾಲೆ-ಕಾಲೇಜಿಗೆ ನಡೆದು ಬರುವ ಮಕ್ಕಳಿಗೆ ಈ ನೀರು ಸಿಡಿಯುತ್ತಿದೆ. ಮಳೆಗಾಲದ ಮುನ್ನ ಮುನ್ನಚ್ಚರಿಕೆವಹಿಸದ ಕಾರಣ ಸಹಸ್ರಳ್ಳಿ ಹಾಗೂ ಸುತ್ತಮುತ್ತಲಿನ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಯಲ್ಲಾಪುರ-ಮುಂಡಗೋಡು ರಸ್ತೆಯಲ್ಲಿ ನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಜೋರು ಮಳೆ ಬಂದಾಗ ರಸ್ತೆ ತುಂಬ ತ್ಯಾಜ್ಯ ಹಾಗೂ ನೀರು ನಿಲ್ಲುತ್ತಿರುವುದರಿಂದ ಆ ಮಾರ್ಗದಲ್ಲಿ ಸಂಚರಿಸುವವರಿಗೆ ಸಮಸ್ಯೆಯಾಗಿದೆ. ಬಸ್ ಡಿಪೋ ಸಹ ಇದೇ ರಸ್ತೆಯಲ್ಲಿದ್ದು, ಕೆಎಸ್‌ಆರ್‌ಟಿಸಿ ಚಾಲಕರು ತೊಂದರೆಗೆ ಒಳಗಾಗಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಅಧಿಕಾರಿಗಳಿಗೆ ಕಿವಿಮಾತು ಹೇಳುವ ಕೆಲಸ ಮಾಡಿಲ್ಲ.
`ಮುಂಡಗೋಡು ಭಾಗದಲ್ಲಿ ಅನೇಕರು ಯಲ್ಲಾಪುರಕ್ಕೆ ಬಂದು ಕಾರವಾರ-ಅಂಕೋಲಾ ಕಡೆ ತೆರಳಲು ಈ ಮಾರ್ಗ ಬಳಸುತ್ತಾರೆ. ಜೊತೆಗೆ ಸ್ಥಳೀಯರಿಗೆ ಸಹ ಇದರಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಸಮಸ್ಯೆ ದೂರ ಮಾಡಲು ಸೂಕ್ತ ಪರಿಹಾರ ಒದಗಿಸಬೇಕು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಭಟ್ಟ ಹುತ್ಕಂಡ ಆಗ್ರಹಿಸಿದರು.
Discussion about this post