ಮಂಗನ ಕಾಯಿಲೆಗೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಂಕೋಲಾ ಅವರ್ಸಾದ ಆರವ್ ಬಾಲ್ಯದಲ್ಲಿಯೇ ಬದುಕಿನ ಪಯಣ ಮುಗಿಸಿದ್ದಾರೆ. ವಿಧಿಯ ಆಟದ ಮುಂದೆ ಸಚಿವರ ಶಿಫಾರಸ್ಸು, ವೈದ್ಯರ ಪ್ರಯತ್ನ, ಸಾಮಾಜಿಕ ಕಾರ್ಯಕರ್ತರ ಹೋರಾಟ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ.
ಅಂಕೋಲಾದ ಅವರ್ಸಾದಲ್ಲಿ ಆರವ್ ನಾಯ್ಕ (11) ಜ್ವರದಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದಾಗ ಆರವ್ ಅವರಿಗೆ ಮಂಗನ ಕಾಯಿಲೆಯಿರುವುದು ಗೊತ್ತಾಯಿತು. ಕಳೆದ ಏಪ್ರಿಲ್ ತಿಂಗಳಿನಲ್ಲಿ ವೈದ್ಯರು ರೋಗವನ್ನು ದೃಢಪಡಿಸಿದ್ದರು. ಮನೆಯಲ್ಲಿನ ಬಡತನದ ನಡುವೆಯೂ ಕುಟುಂಬದವರು ಚಿಕಿತ್ಸೆ ಕೊಡಿಸುತ್ತಿದ್ದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರಿಗೆ ಈ ವಿಷಯ ಅರಿತು ಅವರು ಅಲ್ಲಿ-ಇಲ್ಲಿ ಫೋನ್ ಮಾಡಿಸಿದರು. ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾದ ವೇಳೆ ಆರೋಗ್ಯದಲ್ಲಿ ಏರುಪೇರಾದಾಗ ಬೆಂಗಳೂರಿನ ನಿಮಾನ್ಸ್ ಹಾಗೂ ಆ ನಂತರ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಆರವ್ ಅವರನ್ನು ದಾಖಲಿಸಲಾಯಿತು. ವೆಂಟಿಲೇಟರ್ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಸಚಿವರ ಆಪ್ತಕಾರ್ಯದರ್ಶಿಗಳು ಶಿಫಾರಸ್ಸು ಮಾಡಿದ್ದರು.
ಚಿಕಿತ್ಸೆಯಿಲ್ಲದ ರೋಗ ಎಂಬ ಅರಿವಿದ್ದರೂ ಆರವ್ ಅವರಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ. ಶನಿವಾರ ಮುಗಿಯುವವರೆಗೂ ಆರವ್ ಬದುಕಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಚಿಕಿತ್ಸೆಗೆ ಆರವ್ ಸ್ಪಂದಿಸಲಿಲ್ಲ. ಇನ್ನೂ ಬಾಳಿ ಬದುಕಬೇಕಿದ್ದ ಬಾಲಕ ಮಂಗನ ಖಾಯಿಲೆಯಿಂದ ಕೊನೆಯುಸಿರೆಳೆದರು.
Discussion about this post