ಜೊಯಿಡಾದ ರಾಮನಗರದಲ್ಲಿ ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ಅಕ್ಕ-ಪಕ್ಕದ ಮನೆ ನಡುವೆ ಹಾಕಿದ್ದ ಕೋಲಿನ ಬೇಲಿ ಮುರಿದಿದ್ದು, ಆ ಬೇಲಿ ಸರಿಪಡಿಸುವ ವಿಷಯವಾಗಿ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಶಿವಕುಮಾರ್ ಹಣಬರ್ ಎಂಬಾತರು ದಿಗಂಬರ ಹಣಬರ್ ಅವರ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ.
ರಾಮನಗರ ಪಿರೆಗಾಳಿಯಲ್ಲಿ ಅಂಗನವಾಡಿ ಸಹಾಯಕಿ ರೇಖಾ ಹಣಬರ್ ಹಾಗೂ ದಿಗಂಬರ್ ಹಣಬರ್ ಎಂಬ ದಂಪತಿ ತಮ್ಮ ಪಾಡಿಗೆ ತಾವು ವಾಸವಾಗಿದ್ದರು. ಅವರ ಪಕ್ಕದ ಮನೆಯಲ್ಲಿ ಕೃಷ್ಣ ಹಣಬರ್ ಅವರ ಕುಟುಂಬ ವಾಸವಾಗಿತ್ತು. ಕೃಷ್ಣ ಹಣಬರ್ ಅವರ ನಿಧನದ ನಂತರ ಅವರ ಇಬ್ಬರು ಪತ್ನಿಯರಾದ ಆನಂದಿ ಹಣಬರ್ ಹಾಗೂ ನಿಂಗು ಹಣಬರ್ ಅವರು ತಮ್ಮ ಮಕ್ಕಳಾದ ಶಿವಕುಮಾರ ಹಾಗೂ ಶಂಕರ್ ಜೊತೆ ಅಲ್ಲಿ ವಾಸವಾಗಿದ್ದರು.
ಜಾಗದ ವಿಷಯವಾಗಿ ಅಕ್ಕ-ಪಕ್ಕದವರ ನಡುವೆ ಸದಾ ಜಗಳ ನಡೆಯುತ್ತಿತ್ತು. ಈ ಬಗ್ಗೆ ಅರಿವಿದ್ದರೂ ರೇಖಾ ಹಣಬರ್ ಕುಟುಂಬದವರು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಿರುವಾಗ ರೇಖಾ ಹಣಬರ್ ಹಾಗೂ ಆನಂದಿ-ನಿAಗು ಅವರ ಮನೆ ನಡುವೆಯಿದ್ದ ಕೋಲಿನ ಗೇಟು ಮಳೆಗೆ ಮುರಿದು ಬಿದ್ದಿತು. ಇದನ್ನು ನೋಡಿದ ರೇಖಾ ಅವರ ಪತಿ ದಿಗಂಬರ್ ಹಣಬರ್ ಭಾನುವಾರ ಅದನ್ನು ಸರಿಪಡಿಸುವ ಕೆಲಸ ಶುರು ಮಾಡಿದರು. ಆದರೆ, ಇದನ್ನು ಸಹಿಸದೇ ಆನಂದಿ ಹಣಬರ್ ಹಾಗೂ ನಿಂಗು ಹಣಬರ್ ಒಟ್ಟಿಗೆ ಜಗಳಕ್ಕೆ ಬಂದರು. ಆ ಮನೆಯ ಮಕ್ಕಳಾದ ಶಂಕರ್ ಹಾಗೂ ಶಿವಕುಮಾರ್ ಸಹ ಜಗಳ ಮಾಡಿದರು.
ಈ ಜಗಳ ಹೊಡೆದಾಟದ ಸ್ವರೂಪಪಡೆದಿದ್ದು, ಆಗ ಶವಕುಮಾರ ಹಣಬರ್ ಕಬ್ಬಿಣದ ರಾಡು ಹೊರಗೆ ತಂದರು. ಆ ರಾಡಿನಿಂದ ದಿಗಂಬರ್ ಹಣಬರ್ ಅವರ ತಲೆಗೆ ಬಾರಿಸಿದರು. ಅಲ್ಲಿಯೇ ದಿಗಂಬರ್ ಹಣಬರ್ ಕುಸಿದು ಬಿದ್ದಿದ್ದು, ಅವರ ಕೂಗಿಗೆ ಅಕ್ಕಪಕ್ಕದ ಮನೆಯವರಾದ ಬಾಬಿನಿ ಹಣಬರ, ಲಕ್ಷಣ ಹಣಬರ, ಗೋವಿಂದ ಹಣಬರ, ಶೋಭಾ ಹಣಬರ್ ಓಡಿ ಬಂದರು. ಗಾಯಗೊಂಡು ಬಿದ್ದಿದ್ದ ದಿಗಂಬರ್ ಹಣಬರ್ ಅವರನ್ನು ಬಾಬಿನಿ ಹಣಬರ ಅವರು ತಮ್ಮ ಕಾರಿನಲ್ಲಿ ಕೂರಿಸಿದರು. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರು.
ಸದ್ಯ ದಿಗಂಬರ್ ಹಣಬರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ವಿಜಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹೊಡೆದಾಟದ ಬಗ್ಗೆ ರೇಖಾ ಹಣಬರ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Discussion about this post