ಕಾರವಾರ ನಗರಠಾಣೆ ಪಿಎಸೈ ರವೀಂದ್ರ ಬಿರಾದರ ಅವರ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆ ಮಹಾಂತ ಶಿವಯೋಗಿಗಳ ಪ್ರವೇಶವಾಗಿದ್ದು, ಅವರು ಹಾಕಿಕೊಟ್ಟ ತತ್ವದ ಅಡಿ ರವೀಂದ್ರ ಬೀರಾದರ್ ಅವರು ದುಶ್ಚಟಗಳ ವಿರುದ್ಧ ಅರಿವು ಮೂಡಿಸುತ್ತಿದ್ದಾರೆ.
ರವೀಂದ್ರ ಬಿರಾದರ ಅವರು ಜಮಖಂಡಿಯಲ್ಲಿ ಕಾಲೇಜು ಓದುತ್ತಿದ್ದರು. ಆ ಕಾಲೇಜಿಗೆ ಮಹಾಂತ ಶಿವಯೋಗಿಗಳು ಆಗಮಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಯೋಗಿಗಳು ಸಭೆ ಮುಗಿದ ನಂತರ `ದುಶ್ಚಟದಿಂದ ದೂರ’ ಎನ್ನವ ಬಗ್ಗೆ ಪ್ರಮಾಣ ಮಾಡಿಸಿದ್ದರು.
ದುಶ್ಚಟ ವಿರುದ್ಧದ ಅಭಿಯಾನದ ಆಂದೋಲನದ ಅಂಗವಾಗಿ `ಎಂದಿಗೂ ವ್ಯಸನಗಳನ್ನು ಬಳಸುವುದಿಲ್ಲ’ ಎಂದು ರವೀಂದ್ರ ಬೀರಾದರ್ ಅವರು ಆ ದಿನ ಚೀಟಿಯಲ್ಲಿ ಬರೆದಿದ್ದರು. ಆ ಚೀಟಿಯನ್ನು ಯೋಗಿಗಳ ಜೋಳಿಗೆಗೆ ಹಾಕಿದ್ದರು. ನೂರಾರು ವಿದ್ಯಾರ್ಥಿಗಳಿಂದ ಚೀಟಿಪಡೆದ ಯೋಗಿಗಳು ತಮ್ಮ ಜೋಳಿಗೆ ತುಂಬಿಸಿಕೊoಡಿದ್ದರು.
ಮಹಾoತ ಶಿವಯೋಗಿಗಳ ಭೇಟಿ ರವೀಂದ್ರ ಬೀರಾದರ್ ಅವರ ಪಾಲಿಗೆ ಮಹತ್ವದ ದಿನವಾಗಿದ್ದು, ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ರವೀಂದ್ರ ಬೀರಾದರ್ ಅವರು ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಲು ಶುರು ಮಾಡಿದರು. `ನಾನು ಪೊಲೀಸ್ ಆಗಿರಲು ಮಹಾಂತ ಶಿವಯೋಗಿಗಳ ಆಶೀರ್ವಾದವೇ ಕಾರಣ’ ಎಂದು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ `ವ್ಯಸನ ಮುಕ್ತ ದಿನಾಚರಣೆ’ಯಲ್ಲಿ ರವೀಂದ್ರ ಬೀರಾದರ್ ತಿಳಿಸಿದರು.
`ದುಶ್ಚಟಗಳಿಗೆ ಬಲಿ ಆಗಿದ್ದರೆ ಯಾವ ಸಾಧನೆಯೂ ಸಾಧ್ಯವಾಗುತ್ತಿರಲಿಲ್ಲ. ವಿದ್ಯಾರ್ಥಿ ಜೀವನದಲ್ಲಿಯೇ ಶಿವಯೋಗಿಗಳ ಮಾರ್ಗದರ್ಶನದಿಂದ ಅನೇಕರಿಗೆ ಉತ್ತಮ ಬದುಕು ಸಿಕ್ಕಿದೆ’ ಎಂದು ಅವರು ಸ್ಮರಿಸಿದರು. `ಯುವಕರು ಹೆಚ್ಚಾಗಿ ವ್ಯಸನಗಳಿಗೆ ಬಲಿಯಾಗುತ್ತಾರೆ. ಚಿಕ್ಕ ಚಿಕ್ಕ ಚಟಗಳು ವ್ಯಸನಗಳಾಗಿ ಬದಲಾಗುತ್ತದೆ. ವಿದ್ಯಾರ್ಥಿಗಳು ಚಟಗಳಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆ-ಮಾರಾಟದ ಸುಳಿವು ಸಿಕ್ಕರೆ 112ಗೆ ಫೋನ್ ಮಾಡಬೇಕು’ ಎಂದು ಅವರು ಕರೆ ನೀಡಿದರು. `ಮಾದಕ ವಸ್ತು ಮಾರಾಟಗಾರರಿಗೆ 10 ವರ್ಷ ಜೈಲು ಶಿಕ್ಷೆಯಿದೆ. ಸೇವನೆ ಮಾಡಿದವರಿಗೂ ಶಿಕ್ಷೆ ಖಚಿತ’ ಎಂದು ಅವರು ಕಾನೂನು ಪಾಠ ಮಾಡಿದರು.
Discussion about this post