ನಾಲ್ಕುವರೆ ತಿಂಗಳ ಹಿಂದೆ ಬೈಕ್ ಕದ್ದು ಪರಾರಿಯಾಗಿದ್ದ ಕಳ್ಳರು ನಿನ್ನೆ ರಾತ್ರಿ ಆ ಬೈಕನ್ನು ಮಾಲಕರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಪ್ರದರ್ಶಿಸಿದ್ದಾರೆ. ಎಷ್ಟು ಹುಡುಕಿದರೂ ಸಿಗದ ಬೈಕು ದಿಢೀರ್ ಆಗಿ ಪ್ರತ್ಯಕ್ಷವಾಗಿದನ್ನು ನೋಡಿ ಬೈಕ್ ಮಾಲಕರು ಖುಷಿಯಾಗಿದ್ದಾರೆ!
ಯಲ್ಲಾಪುರ ತಾಲೂಕಿನ ನಂದೂಳ್ಳಿ ಬಳಿ ಈ ವಿಚಿತ್ರ ವಿದ್ಯಮಾನ ನಡೆದಿದೆ. ಅಣಲಗಾರ ಬಳಿಯ ಹುಲಗಾನಿನ ಭಾಸ್ಕರ ಸಿದ್ದಿ ಗುಡೆತೋಟ ಅವರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ತಮ್ಮ ಹಾಗೂ ಕುಟುಂಬದ ಓಡಾಟಕ್ಕಾಗಿ ಅವರು ಎರಡು ವರ್ಷದ ಹಿಂದೆ ಬೈಕ್ ಖರೀದಿಗೆ ನಿರ್ಧರಿಸಿದ್ದರು. ಇದಕ್ಕಾಗಿ 35 ಸಾವಿರ ರೂ ವ್ಯಯಿಸಿದ ಅವರು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದರು. ಬಜಾಜ್ ವಿಕ್ರಾಂತ್ ಬೈಕನ್ನು ಅವರು ಖುಷಿಯಿಂದ ಓಡಿಸುತ್ತಿದ್ದರು.
ಅಕ್ಟೊಬರ್ 30ರಂದು ಭಾಸ್ಕರ ಸಿದ್ದಿ ಅವರ ಮಗ ಬಾಲಚಂದ್ರ ಸಿದ್ದಿ ಅವರು ನಂದೂಳ್ಳಿಯಲ್ಲಿರುವ ತಮ್ಮ ಸ್ನೇಹಿತನ ಮನೆಗೆ ಹೋಗಿದ್ದರು. ಬಸ್ ನಿಲ್ದಾಣ ಸಮೀಪದ ಶಾಲೆ ಎದುರು ಅವರು ಆ ಬೈಕನ್ನು ನಿಲ್ಲಿಸಿದ್ದರು. ರಾತ್ರಿ ಸ್ನೇಹಿತನ ಮನೆಯಿಂದ ಹೊರ ಬಂದಾಗ ಅಲ್ಲಿ ಆ ಬೈಕು ಕಾಣಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಬೈಕ್ ಮಾತ್ರ ಸಿಗಲಿಲ್ಲ. ಸೆಕೆಂಡ್ ಹ್ಯಾಂಡ್ ಬೈಕು ಖರೀದಿಸಿದ್ದು, ಮಾಲಕತ್ವ ಬದಲಾವಣೆಗೆ ಕೋರಿ ಆರ್ ಟಿ ಓ ಕಚೇರಿಗೆ ಸಲ್ಲಿಸಿದ ಅರ್ಜಿ ಬೈಕ್ ಕಳ್ಳತನ ನಡೆದ ಕೆಲ ದಿನದ ನಂತರ ಮಾಲಕರ ಕೈ ಸೇರಿತು. ಹೀಗಾಗಿ ಬೈಕ್ ಕಳ್ಳತನ ನಡೆದ ಹೊತ್ತಿಗೆ ಪೊಲೀಸ್ ದೂರು ನೀಡಲು ಸಾಧ್ಯವಾಗಿರಲಿಲ್ಲ. ಅದಾಗಿಯೂ, ಬೈಕ್ ಕಳ್ಳತನದ ಬಗ್ಗೆ ಭಾಸ್ಕರ ಸಿದ್ದಿ ಹಾಗೂ ಬಾಲಚಂದ್ರ ಸಿದ್ದಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ಜೊತೆ ಅವರು ಹುಡುಕಾಟ ನಡೆಸಿದ್ದರು.
ಎಷ್ಟೇ ಹುಡುಕಾಟ ನಡೆಸಿದರೂ ಬೈಕ್ ಮಾತ್ರ ಸಿಗಲಿಲ್ಲ. ಹೀಗಾಗಿ ಅಧಿಕೃತ ಪೊಲೀಸ್ ದೂರು ನೀಡುವುದಕ್ಕಾಗಿ ಭಾಸ್ಕರ್ ಸಿದ್ದಿ ಅವರು ಸಿದ್ಧತೆ ಮಾಡಿದ್ದರು. ತಮ್ಮ ಹೆಸರಿನಲ್ಲಿದ್ದ ಬೈಕಿನ ದಾಖಲೆಗಳನ್ನು ಸಂಗ್ರಹಿಸಿದ್ದ ಅವರು ಸುತ್ತಲಿನ ಸಿಸಿ ಕ್ಯಾಮರಾ ಪರಿಶೀಲನೆಗೂ ಆಸಕ್ತಿವಹಿಸಿದ್ದರು. ಇನ್ನೇನೂ ದೂರು ಕೊಡಲು ಹೊರಡಬೇಕು ಎನ್ನುವಷ್ಟರಲ್ಲಿ ಆ ಬೈಕು ಕಾಣೆಯಾದ ಸ್ಥಳದಲ್ಲಿಯೇ ಪ್ರತ್ಯಕ್ಷವಾಗಿತ್ತು. ಬೈಕಿನ ಚಾವಿ ಇಲ್ಲದಿದ್ದರೂ ಅದನ್ನು ಹೊತ್ತೊಯ್ದಿದ್ದ ಕಳ್ಳರು ಆ ಶಾಲೆಯ ಎದುರೇ ಬೈಕ್ ನಿಲ್ಲಿಸಿ ಪರಾರಿಯಾಗಿದ್ದರು. `ಯಾವ ಉದ್ದೇಶಕ್ಕಾಗಿ ಕಳ್ಳರು ಬೈಕ್ ಕದ್ದಿದ್ದರು? ಯಾವ ಉದ್ದೇಶದಿಂದ ಆ ಬೈಕನ್ನು ಮರಳಿಸಿದರು?’ ಎಂದು ಭಾಸ್ಕರ ಸಿದ್ದಿ ಅವರಿಗೂ ಗೊತ್ತಾಗಲಿಲ್ಲ. ಇನ್ನೂ ಆ ಬೈಕು ಚಾವಿ ಹಾಕಿದರೂ ಚಾಲು ಆಗುವ ಸ್ಥಿತಿಯಲ್ಲಿರಲಿಲ್ಲ. `ಯಾವುದೋ ವಾಹನದಲ್ಲಿ ಬೈಕ್ ಒಯ್ದು, ಮತ್ತೆ ಅಂಥಹುದೇ ವಾಹನದಲ್ಲಿ ಬೈಕನ್ನು ತಂದಿರಿಸಿರುವ ಸಾಧ್ಯತೆಯಿದೆ’ ಎಂದು ಬಾಲಚಂದ್ರ ಸಿದ್ದಿ ಅವರು ವಿವರಿಸಿದರು. `ಸದ್ಯ ಬೈಕನ್ನು ಗ್ಯಾರೇಜಿಗೆ ಕಳುಹಿಸಿ ರಿಪೇರಿ ಮಾಡಲಾಗುತ್ತಿದೆ’ ಎಂದವರು ವಿವರಿಸಿದರು.