ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಕಿಡಿಕಾರುತ್ತಿರುವ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಡಳಿತ ವೈಪಲ್ಯದ ವಿರುದ್ಧ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದಾರೆ. ಅಲ್ಪ ಕಾಲದ ವಿರಾಮದ ಬಳಿಕ ಇದೀಗ ಮತ್ತೆ ಇನ್ನೊಂದು ಹೋರಾಟಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ.
ಹದಗೆಟ್ಟ ರಸ್ತೆ ದುರಸ್ತಿ, ಮಳೆ ಮಾಪನ ನಿರ್ವಹಣೆ, ಸರ್ಕಾರಿ ಬಸ್ಸಿನ ಸಮಸ್ಯೆ ನಿವಾರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅವರು ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ. ಅಗಷ್ಟ 7ರಂದು ಮಾರಿಕಾಂಬೆ ದೇವಸ್ಥನದಿಂದ ಶಿರಸಿ ಸಹಾಯಕ ಆಯುಕ್ತರ ಕಚೇರಿಯವರೆಗೆ ಅವರ ಹೋರಾಟದ ಯಾತ್ರೆ ಸಾಗಲಿದೆ. `ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಅವರ ಅತ್ಯಂತ ಕೆಟ್ಟ ಆಡಳಿತ ಮತ್ತು ಬೇಜವಾಬ್ದಾರಿತನದ ಪ್ರತಿಫಲವಾಗಿ ಕ್ಷೇತ್ರದ ರಸ್ತೆಗಳೆಲ್ಲವು ಹೊಂಡಗಳಿoದ ಕೂಡಿದೆ. ಶಾಸಕರಿಗೆ ಜವಾಬ್ದಾರಿ ಇಲ್ಲದ ಕಾರಣ ಸಹಾಯಕ ಆಯುಕ್ತರು ಸಭೆ ನಡೆಸಿ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
`ಶಿರಸಿಯ ಎಲ್ಲಾ ಕಡೆ ರಸ್ತೆ ಹೊಂಡಗಳಿoದ ಕೂಡಿದೆ. ಶಿರಸಿ ಡಿಪೋದಲ್ಲಿ 79 ಡಕೋಟಾ ಬಸ್ಸುಗಳಿದ್ದು, ಗುಜುರಿಗೆ ಹಾಕಬೇಕಿದ್ದ ಬಸ್ಸುಗಳನ್ನು ಈ ಕ್ಷೇತ್ರಕ್ಕೆ ನೀಡಲಾಗಿದೆ. 150ಕ್ಕೂ ಅಧಿಕ ಮೆಕಾನಿಕ್ ಹುದ್ದೆ ಖಾಲಿಯಿರುವುದರಿಂದ ಬಸ್ಸು ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ’ ಎಂದವರು ಆಕ್ರೋಶವ್ಯಕ್ತಪಡಿಸಿದ್ದಾರೆ. `ಶಿರಸಿ, ಬನವಾಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡು ಭಾಗದ ಎಲ್ಲಾ ರಸ್ತೆಗಳು ಸರಿ ಮಾಡಬೇಕು. ಹಾಳಾದ ಮಳೆ ಮಾಪನ ಕೇಂದ್ರಗಳನ್ನು ನಿರ್ವಹಣೆ ಮಾಡಿ, ರೈತರಿಗೆ ನೆರವಾಗಬೇಕು’ ಎಂದವರು ಆಗ್ರಹಿಸಿದ್ದಾರೆ.
`ಜನರ ಸಮಸ್ಯೆಗೆ ಸ್ಪಂದಿಸಲು ಸಹಾಯಕ ಆಯುಕ್ತರು ಎಲ್ಲಾ ಅಧಿಕಾರಿಗಳನ್ನು ಕರೆದು ಸಾರ್ವಜನಿಕ ಸಮನ್ವಯ ಸಭೆ ನಡೆಸಬೇಕು. ಸಭೆ ನಡೆಯುವವರೆಗೂ ಈ ಹೋರಾಟ ನಿರಂತರ’ ಎಂದು ಘೋಷಿಸಿದರು.
Discussion about this post