ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಾಗುತ್ತಿದ್ದ ಬಸ್ಸಿಗೆ ಯಲ್ಲಾಪುರದಲ್ಲಿ ಬೈಕು ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಆ ಬೈಕು ಸುಟ್ಟು ಕರಕಲಾಗಿದ್ದು, ಹಳಿಯಾಳದ ಬೈಕ್ ಸವಾರ ಭಾವತೀಸ್ ಘಾಡಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಕುಮಟಾ ಸರ್ಕಾರಿ ಬಸ್ ಡಿಪೋದ ರವಿ ಚಿಗರಿ ಅವರು ಕುಮಟಾ-ವಿಜಯಪುರ ಮಾರ್ಗದ ಚಾಲಕರಾಗಿದ್ದಾರೆ. ಮಾರ್ಚ 23ರಂದು ಅವರು ವಿಜಯಪುರಕ್ಕೆ ಹೋಗಿದ್ದು, ಮಾರ್ಚ 24ರಂದು ಅಲ್ಲಿಂದ ಪ್ರಯಾಣಿಕರನ್ನು ಕರೆದುಕೊಂಡು ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದರು. ಆ ಬಸ್ಸು ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಯಲ್ಲಾಪುರದ ಕಡೆ ಬರುತ್ತಿತ್ತು. ನಸುಕಿನ 1.20ಕ್ಕೆ ಕೋಳಿಕೆರೆ ಕ್ರಾಸಿನ ಬಳಿ ಎದುರಿನಿಂದ ಬಂದ ಟಿವಿಎಸ್ ಎಕ್ಸಲ್ ಬೈಕು ಬಸ್ಸಿಗೆ ಡಿಕ್ಕಿ ಹೊಡೆಯಿತು.
ಆ ಟಿವಿಎಸ್ ಎಕ್ಸಲ್ ಬೈಕು ಬಸ್ಸಿನ ಬಲಬದಿಯ ಲೈಟಿಗೆ ಗುದ್ದಿತು. ಪರಿಣಾಮ ಅಲ್ಲಿ ಬೆಂಕಿ ಹತ್ತಿಕೊಂಡಿತು. ಬಸ್ಸಿನ ಚಾಲಕ ರವಿ ಚಿಗರಿ ಹಾಗೂ ನಿರ್ವಾಹಕ ಅಬ್ದುಲ್ ನಜೀರ್ ಅಮೀನಸಾಬ್ ಗೌಂಡಿ ಸೇರಿ ಆ ಬೆಂಕಿ ಆರಿಸಿದರು. ಆದರೆ, ಬೈಕಿಗೆ ಹೊತ್ತಿದ ಬೆಂಕಿ ಆರಿಸಲು ಅವರಿಂದ ಸಾಧ್ಯವಾಗಲಿಲ್ಲ. ಬೈಕ್ ಸವಾರ ಬಾವಿತೀಸ ರೇಮತ್ ಘಾಡಿ ಅವರ ಹಣೆ, ಮುಖಕ್ಕೆ ಗಂಭೀರ ಗಾಯವಾಗಿದನ್ನು ಅವರಿಬ್ಬರು ಗಮನಿಸಿದರು. ಗಾಯಾಳುವನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ಆದರೆ, ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಕೂಡಲೇ ಖಾಸಗಿ ಆಂಬುಲೆನ್ಸಿನ ಮೂಲಕ ಗಾಯಾಳುವನ್ನು ಬಸ್ಸಿನವರು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯವರು ಭಾವತೀಸ್ ಘಾಡಿ ಅವರ ಸಾವನ್ನು ದೃಢೀಕರಿಸಿದರು. ಪಿಸೈ ಸಿದ್ದಪ್ಪ ಗುಡಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದರು.