ಅಂಕೋಲಾ ಪಂಚಾಯತವೂ 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ ಅಡಿ ಅಭಿವೃದ್ಧಿ ಕೆಲಸಗಳಿಗೆ 86.31 ಕೋಟಿ ರೂ ಆಯವ್ಯಯ ಮಂಡಿಸಿದೆ.
ನೂತನ ಆಡಳಿತಾಧಿಕಾರಿ ಪ್ರಕಾಶ ಆರ್ ಹಾಲಮ್ಮನವರ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಅನುದಾನ ಅಂದಾಜು ಪತ್ರ ಹಂಚಿಕೆ ಮಾಡಿದರು. ಕಳೆದ ಸಾಲಿಗಿಂತ ಈ ಸಲ 1.34 ಕೋಟಿ. ರೂ. ಹೆಚ್ಚಿಗೆ ಅನುದಾನ ಒದಗಿಸಲಾಗಿದೆ. ತಾ ಪಂ. ಕಾರ್ಯಕ್ರಮಗಳನ್ನು ಪ್ರಮುಖವಾಗಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತದೆ.
ಸರ್ವ ಶಿಕ್ಷಣ ಇಲಾಖೆಗೆ 3.05 ಕೋಟಿ ರೂ, ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ 52.06 ಕೋಟಿ ರೂ. ಪ್ರೌಢ ಶಿಕ್ಷಣಕ್ಕೆ 14.72 ಕೋಟಿ ರೂ, ಪರಿವೀಕ್ಷಣೆಗೆ 1.57 ಕೋಟಿ ರೂ, ಆರೋಗ್ಯ ಇಲಾಖೆಗೆ 30.11 ಲಕ್ಷ ರೂ, ಸಮಾಜ ಕಲ್ಯಾಣ ಇಲಾಖೆಗೆ 83.11 ಲಕ್ಷ ರೂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 13.72 ಲಕ್ಷ ರೂ, ಕೃಷಿ ಇಲಾಖೆಗೆ 48 ಲಕ್ಷ ರೂ, ಪಶು ಸಂಗೋಪನ ಇಲಾಖೆಗೆ 58.73 ಲಕ್ಷ ರೂ, ಶಿಶು ಅಭಿವೃದ್ಧಿ ಇಲಾಖೆಗೆ 7.22 ಕೋ.ರೂ, ತಾಲೂಕ ಪಂಚಾಯತ ನಿರ್ವಹಣೆಗೆ 5.15 ಕೋಟಿ ರೂ, ನೀರು ಸರಬರಾಜು ಯೋಜನೆಗೆ 2.17 ಲಕ್ಷ ರೂ, ವೈದ್ಯಕೀಯ ವೆಚ್ಚ 15.33 ಲಕ್ಷ ರೂ ಹಂಚಿಕೆ ಮಾಡಲಾಗಿದೆ.
ಬಾಳೆಗುಳಿಯಲ್ಲಿ ತುರ್ತಾಗಿ ಬಸ್ ತಂಗುದಾಣ ನಿರ್ಮಿಸಲು ಸ್ಥಳ ನಿಗದಿಪಡಿಸುವ ವಿಚಾರ ಪ್ರಸ್ತಾಪವಾಯಿತು. ಕಾರವಾರದಿಂದ ಅಂಕೋಲಾಕ್ಕೆ ಆಗಮಿಸುವ ಬಸ್ಸುಗಳು ಬಾಳೆಗುಳಿ ಫ್ಲೈ ಓವರ ಬದಲಿಗೆ ಸರ್ವಿಸ್ ರಸ್ತೆಯ ಮೂಲಕ ಬಂದು ಬಾಳೆಗುಳಿ ಕ್ರಾಸಿನಲ್ಲಿ ಪ್ರಯಾಣಿಕರನ್ನು ಇಳಿಸುವಂತೆಯೂ, ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವೇಳೆಯಲ್ಲಿ ಬಸ್ಸುಗಳು ಸಂಚರಿಸುವAತೆಯೂ ಸಾರಿಗೆ ಅಧಿಕಾರಿಗಳಿಗೆ ಪ್ರಕಾಶ ಆರ್ ಹಾಲಮ್ಮನವರ ಸೂಚಿಸಿದರು. ಸಾಮರ್ಥ್ಯ ಸೌಧದ ಬಳಿ ಇರುವ ಅಪಾಯಕಾರಿ ಮರ ತೆರವುಗೊಳಿಸುವಂತೆ ಹಾಗೂ ಬೀದಿ ನಾಯಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪುರಸಭೆಗೆ ಸೂಚಿಸಿದರು.