`ಸೇವೆಯೇ ಧರ್ಮ, ನಿಷ್ಠೆಯೇ ಮಾರ್ಗ’ ಎಂಬ ತತ್ವದ ಅಡಿ ನಡೆಯುತ್ತಿರುವ ನಮ್ಮ ನಿಮ್ಮೆಲ್ಲರ ಸ್ವಯಂ ಸೇವಕರ ಸಂಘಕ್ಕೆ ಇದೀಗ ಶತಮಾನದ ಸಂಭ್ರಮ. 1925-2025ರವರೆಗೆ ಎಲ್ಲಿಯೂ ಎಡವದೇ ಮುನ್ನುಗ್ಗುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಶಿರಸಿಗೆ ಅಪರೂಪದ ಸಂಬ0ಧವಿದೆ. ಆ ಸಂಬoಧಕ್ಕೆ ಸಾಕ್ಷಿಯಾಗಿ ಶಿರಸಿಯಲ್ಲಿ ಈಗಲೂ RSS ಕಾರ್ಯಕರ್ತರಿಗೆ ವೈದ್ಯ ಕುಟುಂಬವೊoದು ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿದೆ!
ಸಂಘದ ದ್ವಿತೀಯ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳವಲ್ಕರ್ ಗುರೂಜಿ ಅವರು (1906-1973) ತಮ್ಮ ಜೀವನದುದ್ದಕ್ಕೂ ಭಾರತದ ಅನೇಕ ಪ್ರಾಂತ್ಯಗಳಿಗೆ ಪ್ರವಾಸ ಮಾಡಿದರು. ಅವರ ಕಾರ್ಯಶೈಲಿಯಲ್ಲಿ ಒಂದು ವಿಶೇಷತೆ ಅಡಗಿತ್ತು. ಅವರು ಯಾವುದೇ ಊರಿನಲ್ಲಿ ಮೂರು ದಿನಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿರಲಿಲ್ಲ. ಕೆಲವರ ಅಂಬೋಣದ0ತೆ, ನಿರಂತರ ಪ್ರವಾಸ ಅವರ ಜೀವನದ ಭಾಗವಾಗಿತ್ತು. ಆದರೆ ಶಿರಸಿ ಮಾತ್ರ ಅವರ ಜೀವನದಲ್ಲಿ ಹೊಸ ಅಧ್ಯಾಯ ತೆರೆಯಿತು. ಗುರೂಜಿಯವರು ಶಿರಸಿಗೆ ಎರಡು ಬಾರಿ ಭೇಟಿ ನೀಡಿದ್ದರು. ಆ ಎರಡು ಸಲವೂ ಅವರು ಎರಡು ತಿಂಗಳಿಗಿ0ತ ಹೆಚ್ಚು ದಿನ ಇಲ್ಲಿಯೇ ವಾಸವಾಗಿದ್ದರು. ಇದನ್ನು ಶಿರಸಿಗೆ ಸಿಕ್ಕ ಅಪರೂಪ ಹಾಗೂ ಅಸಾಧಾರಣ ಗೌರವ ಎಂದೇ ಭಾವಿಸಲಾಗುತ್ತದೆ.
ಆಯುರ್ವೇದ ಚಿಕಿತ್ಸೆಗಾಗಿ ಭೇಟಿ
ಗುರೂಜಿಯವರ ಶಿರಸಿ ಪ್ರವಾಸದ ಮುಖ್ಯ ಕಾರಣ ಆರೋಗ್ಯ ಚಿಕಿತ್ಸೆಯಾಗಿತ್ತು. ಶಿರಸಿಯ ಖ್ಯಾತ ಆಯುರ್ವೇದ ವೈದ್ಯರಾದ ವೈದ್ಯ ಗಣಪತರಾವ ಪಟವರ್ಧನ ಅವರ ಸಂಶೋಧನಾತ್ಮಕ ಚಿಕಿತ್ಸಾ ಪದ್ಧತಿಯ ಬಗ್ಗೆ ಗುರೂಜಿಯವರಿಗೆ ಮಾಹಿತಿ ಸಿಕ್ಕಿತ್ತು. ವೈದ್ಯ ಪಟವರ್ಧನರು ಕೇವಲ ಶಾಸ್ತ್ರೀಯ ಆಯುರ್ವೇದವನ್ನು ಅನುಸರಿಸುವವರಲ್ಲ ಎಂಬ ಸತ್ಯ ಅರಿವಾಗಿತ್ತು. ವೈದ್ಯ ಪಟವರ್ಧನರು ತಮ್ಮದೇ ಆದ ಸಂಶೋಧನೆಗಳ ಆಧಾರದ ಮೇಲೆ ವಿಶೇಷ ಚಿಕಿತ್ಸಾ ಪದ್ಧತಿಗಳನ್ನು ಅಭಿವೃದ್ಧಿಪಡಿಸಿದ್ದರು. ಅದೇ ಆಧಾರದಲ್ಲಿ ವೈದ್ಯರು ಸ್ವತಃ ಪ್ರತಿದಿನ ಗುರೂಜಿಯವರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಚಿಕಿತ್ಸೆಯ ಫಲಪ್ರದತೆಯೇ ಗುರೂಜಿಯವರನ್ನು ಶಿರಸಿಯಲ್ಲಿ ದೀರ್ಘಕಾಲ ಉಳಿಯುವಂತೆ ಮಾಡಿತು.
ಗುರೂಜಿಯವರ ರವಿದರ್ಶನ-ಪತ್ರ ವ್ಯವಹಾರ
ಗುರೂಜಿಯವರು ಶಿರಸಿಯ ಹೋಸಪೇಟೆ ರಸ್ತೆಯಲ್ಲಿರುವ ಕಾಶಿನಾಥ ಮೂಡಿಯವರ `ರವಿದರ್ಶನ’ ನಿವಾಸದಲ್ಲಿ ವಾಸವಾಗಿದ್ದರು. ಶಿರಸಿಯ ಶುದ್ಧ ಪರಿಸರ ಮತ್ತು ಪ್ರಶಾಂತ ವಾತಾವರಣವೂ ಅವರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿತ್ತು. ಈಗಲೂ ಸಾಕ್ಷಿಯಾಗಿರುವ ಗುರೂಜಿಯವರು ಮತ್ತು ವೈದ್ಯ ಪಟವರ್ಧನರ ನಡುವಿನ ಪತ್ರ ವ್ಯವಹಾರವು ಈ ಸಂಬ0ಧದ ಆತ್ಮೀಯತೆಯನ್ನು ತೋರಿಸುತ್ತದೆ. ಗುರೂಜಿಯವರ ಕಾರ್ಯದರ್ಶಿಯವರು ವೈದ್ಯರಿಗೆ ಬರೆದ ಮೊದಲ ಪತ್ರದಲ್ಲಿ ಗುರೂಜಿಯವರ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಅಗತ್ಯದ ಬಗ್ಗೆ ಮಾಹಿತಿಗಳಿವೆ. ನಂತರ ಗುರೂಜಿಯವರೇ 8 ಬಾರಿ ವೈದ್ಯರಿಗೆ ಪತ್ರ ಬರೆದಿದ್ದಾರೆ.

ಸಾಮಾನ್ಯವಾಗಿ ಗುರೂಜಿಯವರು ತಮ್ಮ ಕಾರ್ಯದರ್ಶಿಗಳ ಮೂಲಕವೇ ಪತ್ರ ಬರೆಸುತ್ತಿದ್ದರು. ಆದರೆ, ಶಿರಸಿಯ ವೈದ್ಯರಿಗೆ ಅವರು ಸ್ವತಃ ಪತ್ರ ಬರೆದಿದನ್ನು ಗಮನಿಸಿದರೆ ವೈಯಕ್ತಿಕ ಪತ್ರಗಳು ವೈದ್ಯರ ಮೇಲಿನ ಅವರ ವಿಶ್ವಾಸ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. ಈ ಎಲ್ಲಾ ಪತ್ರಗಳು ಪಟವರ್ಧನ ಕುಟುಂಬದ ಸಂಗ್ರಹದಲ್ಲಿ ಸುರಕ್ಷಿತವಾಗಿವೆ. ಗುರೂಜಿಯವರು ಸ್ವತಃ ಬರೆದ ಈ ಪತ್ರಗಳು ಕರ್ನಾಟಕದಲ್ಲೇ ಶಿರಸಿಯಲ್ಲಿ ಮಾತ್ರ ಲಭ್ಯವಿರುವ ಅಪರೂಪದ ಐತಿಹಾಸಿಕ ದಾಖಲೆಗಳಾಗಿವೆ.
ತಲೆಮಾರುಗಳ ಸೇವಾ ಸಂಪ್ರದಾಯ:
ಪಟವರ್ಧನ ಕುಟುಂಬದ ಸೇವಾ ಸಂಪ್ರದಾಯ ಮೂರು ತಲೆಮಾರುಗಳವರೆಗೆ ನಿರಂತರವಾಗಿ ಮುಂದುವರೆದಿದೆ. ವೈದ್ಯ ಗಣಪತರಾವ ಪಟವರ್ಧನ ಅವರದ್ದು ಮೊದಲ ತಲೆಮಾರಾಗಿದ್ದು, ಅವರೇ ಗುರೂಜಿಯವರಿಗೆ ಆಯುರ್ವೇದ ಚಿಕಿತ್ಸೆ ನೀಡಿದ ವೈದ್ಯರು. ಅವರ ಸಂಶೋಧನಾತ್ಮಕ ಚಿಕಿತ್ಸಾ ಪದ್ಧತಿಯು ಗುರೂಜಿಯವರ ಪೂರ್ಣ ನಂಬಿಕೆಯನ್ನು ಗಟ್ಟಿಗೊಳಿಸಿತ್ತು. ನಂತರ ಅವರ ಪುತ್ರ ಡಾ ಅರವಿಂದ ಪಟವರ್ಧನ ತಂದೆಯ ಸೇವಾ ಸಂಪ್ರದಾಯವನ್ನು ಮುಂದುವರಿಸಿದರು. ಸಂಘದ ಕಾರ್ಯಕರ್ತರಿಗೆ ನಿರಂತರವಾಗಿ ಚಿಕಿತ್ಸೆ ನೀಡಿದರು. ಡಾ ರವಿಕಿರಣ ಪಟವರ್ಧನ ಅವರು ಪ್ರಸ್ತುತ ಶಿರಸಿಯಲ್ಲಿ ಆಯುರ್ವೇದ ವೈದ್ಯರಾಗಿ ಕಾರ್ಯನಿರತರಾಗಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಿಗೆ ನಿಸ್ವಾರ್ಥವಾಗಿ ಚಿಕಿತ್ಸೆ ನೀಡುತ್ತಲೇ ಇದ್ದಾರೆ. ತೃತೀಯ ತಲೆಮಾರಿನ ಅವಧಿಯಲ್ಲಿ ಅವರು ತಮ್ಮ ತಾತ-ಮುತ್ತಾತನವರು ಆರಂಭಿಸಿದ ಸೇವಾ ಸಂಪ್ರದಾಯವನ್ನು ಗೌರವಪೂರ್ವಕವಾಗಿ ಮುನ್ನಡೆಸಿದ್ದಾರೆ.
ಗುರೂಜಿಯವರನ್ನು ಸೆಳೆದ ಶಿರಸಿ:
ಶಿರಸಿ ವೈದ್ಯರ ಪರಿಣಾಮಕಾರಿ ಚಿಕಿತ್ಸೆ ಗುರೂಜಿಯವರ ಶಿರಸಿ ಸೆಳೆತಕ್ಕೆ ಮುಖ್ಯ ಕಾರಣ. ವೈದ್ಯ ಪಟವರ್ಧನರ ಸಂಶೋಧನಾತ್ಮಕ ಆಯುರ್ವೇದ ಚಿಕಿತ್ಸೆಯು ಗುರೂಜಿಯವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ತಂದಿತು. ಜೊತೆಗೆ ಶಿರಸಿಯ ಶುದ್ಧ ಪರಿಸರ, ಮಲೆನಾಡಿನ ಶಾಂತ, ಶುದ್ಧ ವಾತಾವರಣವು ಆರೋಗ್ಯ ಚೇತರಿಕೆಗೆ ಅನುಕೂಲಕರವಾಗಿತ್ತು. ವೈದ್ಯರು ಮತ್ತು ಗುರೂಜಿಯವರ ನಡುವೆ ವೈದ್ಯ-ರೋಗಿ ಸಂಬ0ಧಕ್ಕಿ0ತ ಮೀರಿ ಆತ್ಮೀಯ ಸ್ನೇಹ ಬೆಳೆದಿತ್ತು. ರವಿದರ್ಶನ ಮನೆಯ ಕುಟುಂಬದ ಪ್ರೀತಿಯ ಆತಿಥ್ಯ ಸಹ ಗುರೂಜಿಯವರನ್ನು ತಿಂಗಳುಗಳ ಕಾಲ ಇಲ್ಲಿಯೇ ಉಳಿಸಿಕೊಂಡಿತು.
ಶಿರಸಿಯು ಕೇವಲ ಗುರೂಜಿಯವರಿಗೆ ಚಿಕಿತ್ಸೆ ನೀಡಿದ ನಗರವಲ್ಲ. ಸಂಘದ ಕಾರ್ಯಕರ್ತರಿಗೆ ತಲೆಮಾರುಗಳ ಕಾಲ ನಿಸ್ವಾರ್ಥ ಸೇವೆ ನೀಡಿದ ಹಾಗೂ ಈಗಲೂ ನೀಡುತ್ತಿರುವ ಊರು. ಹೀಗಾಗಿ 2025ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ 100ನೇ ವರ್ಷವನ್ನು ಆಚರಿಸುತ್ತಿದೆ. ಈ ಶತಮಾನೋತ್ಸವದಲ್ಲಿ ಶಿರಸಿಯ ಈ ಐತಿಹಾಸಿಕ ಕೊಡುಗೆಯ ಸ್ಮರಣೆ ಅತ್ಯಂತ ಮಹತ್ವದ್ದಾಗಿದೆ.
ಮಾಹಿತಿ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು