`ಅತಿಕ್ರಮಣದಲ್ಲಿ ಮನೆ ಕಟ್ಟಿದವರು ತಮಗೆ 1 ಲಕ್ಷ ರೂ ಕೊಡಬೇಕು’ ಎಂದು ಯಲ್ಲಾಪುರದ ಅಮಿತ ಗಬ್ಬೂರ್ ಬಯಸುತ್ತಾರೆ. ಹೀಗಾಗಿ `ಹಣ ಕೊಡದೇ ಇದ್ದರೆ ಅರಣ್ಯ ಅಧಿಕಾರಿಗಳಿಗೆ ಅರ್ಜಿ ಕೊಡುವೆ’ ಎಂದು ಅವರು ಬೆದರಿಸುತ್ತಾರೆ!
ಯಲ್ಲಾಪುರದ ಮಂಚಿಕೇರಿ ಬಳಿಯ ಜನತಾ ಕಾಲೋನಿಯಲ್ಲಿ ಅಮಿತ ಆಂಜಿನೇಯ ಗಬ್ಬೂರು (36) ಅವರು ವಾಸವಾಗಿದ್ದಾರೆ. ಅತಿಕ್ರಮಣದಲ್ಲಿ ಮನೆ ಮಾಡಿದ ಕಂಪ್ಲಿ ಸೂರ್ಯಮನೆಯ ಮಂಜುನಾಥ ನಾರಾಯಣ ಹೆಗಡೆ ಅವರಿಗೆ ಹಣ ಕೊಡುವಂತೆ ಅಮಿತ ಗಬ್ಬೂರು ಅವರು ಕಾಡಿಸುತ್ತಿದ್ದಾರೆ. `ಹಣ ಕೊಡದೇ ಇದ್ದರೆ ಕೊಲೆ ಮಾಡುವೆ’ ಎಂದೂ ಅವರು ಬೆದರಿಸಿದ್ದಾರೆ!
ಮಂಜುನಾಥ ಹೆಗಡೆ ಅವರು ಹಾಸಣಗಿ ಸೊಸೈಟಿಯಲ್ಲಿ ಸ್ವಿಪರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅಲ್ಲಿ-ಇಲ್ಲಿ ಸಾಲ ಮಾಡಿ ಅವರು ತಮ್ಮ 54ನೇ ವಯಸ್ಸಿನಲ್ಲಿ ಒಂದು ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಆ ಮನೆಯ ಮೇಲೆ ಕಣ್ಣಿಟ್ಟಿರುವ ಅಮಿತ ಗಬ್ಬೂರ್ ಅವರು `ಅರಣ್ಯ ಅಧಿಕಾರಿಗಳಿಗೆ ಅರ್ಜಿ ಹಾಕಿ ನಿಮ್ಮ ಮನೆ ಖುಲ್ಲಾ ಮಾಡಿಸುವೆ’ ಎಂದು ಹೆದರಿಸುತ್ತಿದ್ದಾರೆ.
ನವೆಂಬರ್ 13ರಂದು ಸೊಸೈಟಿಗೆ ಬಂದ ಅಮಿತ ಗಬ್ಬೂರ್ ಅವರು `1 ಲಕ್ಷ ರೂ ಕೊಡಬೇಕು’ ಎಂದು ತಾಕೀತು ಮಾಡಿದ್ದಾರೆ. ನವೆಂಬರ್ 14ರಂದು ಸಹ ಸೊಸೈಟಿಗೆ ಬಂದು ಹಣದ ವಿಷಯ ಮಾತನಾಡಿದ್ದಾರೆ. `ಹಣ ಕೊಡುವುದಿಲ್ಲ’ ಎಂದು ಮಂಜುನಾಥ ಹೆಗಡೆ ಅವರು ಹೇಳಿದ್ದರಿಂದ ಇನ್ನಷ್ಟು ಬೆದರಿಕೆ ಒಡ್ಡಿದ್ದಾರೆ. `ನನ್ನ ಬಳಿ ಬಹಳ ಜನರಿದ್ದಾರೆ. ನಾನು ಹೇಳಿದ ಹಣ ಕೊಡದೇ ಇದ್ದರೆ ನಿನ್ನ ಎತ್ತಿ ಬಿಡುವೆ’ ಎಂದು ಹೆದರಿಸಿದ್ದಾರೆ.
ಅಮಿತ ಗಬ್ಬೂರು ಅವರು ಮಂಜುನಾಥ ಹೆಗಡೆ ಅವರ ಜೊತೆ ಇನ್ನೂ ಅನೇಕರಿಗೆ ಬೆದರಿಸಿದ್ದಾರೆ. ಹಣಕ್ಕಾಗಿ ಪೀಡಿಸಿದ್ದಾರೆ. ಆದರೆ, ಅವರೆಲ್ಲರೂ ಕೇಳಿದಷ್ಟು ಹಣಕೊಟ್ಟು ಸುಮ್ಮನಾಗಿದ್ದಾರೆ. ಆದರೆ, ಹಣ ಕೊಡಲು ಒಪ್ಪದ ಮಂಜುನಾಥ ಹೆಗಡೆ ಧೈರ್ಯದಿಂದ ಪೊಲೀಸ್ ಮೊರೆ ಹೋಗಿದ್ದಾರೆ. ತಮಗಿರುವ ಬೆದರಿಕೆಯ ಬಗ್ಗೆ ವಿವರವಾದ ಮಾಹಿತಿ ನೀಡಿ ಅಮಿತ ಗಬ್ಬೂರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪಿಸೈ ರಾಜಶೇಖರ ವಂದಲಿ ಅವರು ಕಾನೂನು ಕ್ರಮ ಜರುಗಿಸಿದ್ದಾರೆ.
`ಹಪ್ತಾ ವಸೂಲಿದಾರರನ್ನು ಹಿಮ್ಮೆಟ್ಟಿಸಿ’