ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಹೋಗಿದ್ದಾರೆ. ಸುವರ್ಣಸೌಧದ ಹೊರಭಾಗ ಅವರು ಹೋರಾಟ ಶುರು ಮಾಡಿದ್ದು, ಶಿರಸಿಯ ಸಾರ್ವಜನಿಕ ಪಂಡಿತ್ ಆಸ್ಪತ್ರೆಗಾಗಿ ಪಟ್ಟುಹಿಡಿದಿದ್ದಾರೆ.
`ಕಳೆದ ಐದು ವರ್ಷಗಳಿಂದ ಶಿರಸಿಯಲ್ಲಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದೆ. ತಜ್ಞ ವೈದ್ಯರ ನೇಮಕಾತಿ, ವೈದ್ಯಕೀಯ ಯಂತ್ರೋಪಕರಣ ಖರೀದಿ ನಡೆದಿಲ್ಲ. ಶೇ 80ರಷ್ಟು ಕಾಮಗಾರಿ ಮುಗಿದರೂ ಆಸ್ಪತ್ರೆಯ ಕೆಲಸ ವೇಗಪಡೆಯುತ್ತಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಆಕ್ರೋಶದ ಭಾಷಣ ಮಾಡಿದ್ದಾರೆ. ಅವರ ಭಾಷಣ ಕೇಳಿ ಸ್ಥಳಕ್ಕೆ ಸಚಿವ ಶಿವರಾಜ ತಂಗಡಗಿ ಅವರು ಆಗಮಿಸಿದ್ದು, ಹೋರಾಟದಲ್ಲಿ ಮಗ್ನರಾಗಿದ್ದ ಅನಂತಮೂರ್ತಿ ಅವರನ್ನು ಸಮಾಧಾನ ಮಾಡಿದ್ದಾರೆ.
`2020ರಲ್ಲಿ ಸರ್ಕಾರ 250 ಹಾಸಿಗೆಯ ಆಸ್ಪತ್ರೆಗೆ ಆದೇಶ ಹೊರಡಿಸಿದ್ದು, ಇದಕ್ಕಾಗಿ 112 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಯಂತ್ರೋಪಕರಣ ಖರೀದಿಗೆ 30 ಕೋಟಿ ರೂಪಾಯಿ ಪ್ರತ್ಯೇಕವಾಗಿ ಕೊಡಲಾಗಿದೆ. ಕಳೆದ ಒಂದು ವರ್ಷದಿಂದ ಆಸ್ಪತ್ರೆ ಕಾಮಗಾರಿ ನಿಧಾನವಾಗಿದ್ದು, ಯಂತ್ರೋಪಕರಣ ಪೂರೈಕೆ ನಡೆದಿಲ್ಲ. ವೈದ್ಯರ ನೇಮಕಾತಿ ಆಗಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪಘಾತಗಳಿಗೆ ಒಳಗಾಗಿ ಸಾವನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ನ್ಯೂರೋ ಸರ್ಜನ್ ವೈದ್ಯರು ಇಲ್ಲ. ಹಾರ್ಟ್ ಆಪರೇಷನ್ ಮಾಡುವ ಆಸ್ಪತ್ರೆಗಳೂ ಇಲ್ಲ. ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಇಲ್ಲ’ ಎಂಬ ಸಮಸ್ಯೆಗಳನ್ನು ವಿವರಿಸಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಹ ಆತಂಕ ಸಂಗತಿ’ ಎಂಬ ಕಳವಳವ್ಯಕ್ತಪಡಿಸಿದರು. ಈ ಎಲ್ಲ ವಿಷಯ ಆಲಿಸಿದ ಸಚಿವರು `ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ವೈದ್ಯಕೀಯ ಉಪಕರಣ ಖರೀದಿಗೆ ಟೆಂಡರ್ ಕರೆಯಲು ಆರೋಗ್ಯ ಇಲಾಖೆಗೆ ಸೂಚಿಸುತ್ತೇವೆ. ತಜ್ಞ ವೈದ್ಯರ ನೇಮಕಾತಿಗೆ ಕೂಡಲೇ ಆದೇಶಿಸಲು ಸೂಕ್ತ ಸಚಿವಾಲಯಕ್ಕೆ ಮಾಹಿತಿ ನೀಡುತ್ತೇವೆ’ ಎಂಬ ಭರವಸೆ ನೀಡಿದರು. ಜಿಪಂ ಮಾಜಿ ಸದಸ್ಯೆ ಉಷಾ ಹೆಗಡೆ, ಪ್ರಮುಖರಾದ ನಾರಾಯಣ ಹೆಗಡೆ, ಚಿದಾನಂದ ಹರಿಜನ ಮುಂಡಗೋಡು, ಮಂಜುನಾಥ ಕುಪ್ಪಗಡ್ಡೆ, ಅಂಕಿತ್ ಶಿರಸಿ, ಭೀಮಶಿ ವಾಲ್ಮೀಕಿ, ಬಸವರಾಜ ಹಸ್ಲರ್, ಶಂಕರಪ್ಪ, ನೂರ್ ಅಹಮದ್ ಜೊತೆಗಿದ್ದರು,