ಶಿರಸಿಯ ಸಹಾಯಕ ಆಯುಕ್ತರಾಗಿದ್ದ ಕಾವ್ಯರಾಣಿ ಅವರನ್ನು ಸರ್ಕಾರ ದಿಢೀರ್ ಆಗಿ ವರ್ಗಾವಣೆ ಮಾಡಿದೆ. ಭಟ್ಕಳ ಉಪವಿಭಾಗಾಧಿಕಾರಿ ಕಚೇರಿಯ ಪ್ರಭಾರಿಯೂ ಆಗಿದ್ದ ಅವರನ್ನು ಮೈಸೂರಿನ ಹಣಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಓದಿಗೂ ಕೆಎಎಸ್ ಅಧಿಕಾರಿಯಾಗಿದ್ದ ಕಾವ್ಯರಾಣಿ ಅವರು ಕಳೆದ ವರ್ಷ ಶಿರಸಿ ಸಹಾಯಕ ಆಯುಕ್ತರಾಗಿ ಜವಾಬ್ದಾರಿವಹಿಸಿಕೊಂಡಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ವೀರೇಶ ನಾಯ್ಕ ಅವರ ಪುತ್ರಿಯಾಗಿದ್ದ ಕಾವ್ಯರಾಣಿ ಅವರು ತಮ್ಮ ಬದುಕಿನುದ್ದಕ್ಕೂ ಶಿಸ್ತು ರೂಢಿಸಿಕೊಂಡಿದ್ದರು. ಉನ್ನತಮಟ್ಟದ ಅಧಿಕಾರಿಯಾಗಬೇಕು ಎಂದು ಅವರು ಬಾಲ್ಯದಲ್ಲಿಯೇ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದರು. 2019ರ ಅವಧಿಯಲ್ಲಿ ಅವರು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸರ್ಕಾರಿ ಸೇವೆ ಶುರು ಮಾಡಿದರು.
ಅಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಅನೇಕ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಮಕ್ಕಳಿಗೆ ಪ್ರೇರಣಾದಾಯಕ ಪಾಠ ಮಾಡಿದ್ದರು. ಆಡಳಿತ ವಿಷಯದಲ್ಲಿಯೂ ಅವರು ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಕೆ ಕಾವ್ಯರಾಣಿ ಅವರು ಪ್ರಸ್ತುತ ಶಿರಸಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಹಾಯಕ ಆಯುಕ್ತರಾಗಿದ್ದು, ಆಡಳಿತಾತ್ಮಕ ಕಾರಣದಿಂದ ಸರ್ಕಾರ ಅವರನ್ನು ಬೇರೆಡೆ ವರ್ಗಾಯಿಸಿದೆ. ಶಿರಸಿ ಹಾಗೂ ಭಟ್ಕಳಕ್ಕೆ ಹೊಸ ಸಹಾಯಕ ಆಯುಕ್ತರ ಆದೇಶ ಹೊರಬಂದಿಲ್ಲ.