ಯಲ್ಲಾಪುರದ ಕಿರವತ್ತಿ ಬಳಿ ಭಾನುವಾರ ಬೈಕು ಹಾಗೂ ಕಂಟೇನರ್ ನಡುವೆ ಅಪಘಾತವಾಗಿದೆ. ಕಂಟೇನರ್ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಬೈಕಿನಲ್ಲಿದ್ದ ಮತ್ತೊಬ್ಬರಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ.
ಯಲ್ಲಾಪುರದ ಕಿರವತ್ತಿಯ ಅಲ್ಕೇರಿ ತಿರುವಿನ ಬಳಿ ಈ ಅಪಘಾತ ನಡೆದಿದೆ. ಬೈಕ್ ಓಡಿಸುತ್ತಿದ್ದ ಬೈಲಂದೂರಿನ ಕಟ್ಟಡ ಕಾರ್ಮಿಕ ಚಾಯಪ್ಪ ಸೋಮಾಪುರಕರ್ (45) ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಬೈಕಿನಿಂದ ಹೆದ್ದಾರಿಗೆ ಬಿದ್ದ ಚಾಯಪ್ಪ ಸೋಮಾಪುರಕರ್ ಅವರ ಮೈಮೇಲೆ ಲಾರಿ ಹತ್ತಿದೆ. ಲಾರಿ ಚಕ್ರ ತಲೆಗೆ ತಾಗಿದ್ದರಿಂದ ಚಾಯಪ್ಪ ಸೋಮಾಪುರಕರ್ ಅವರು ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ಆ ಬೈಕಿನಲ್ಲಿ ಸಹಸವಾರರಾಗಿದ್ದ ಪ್ರಭಾಕರ ಸೋಮಾಪುರಕರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಪ್ರಭಾಕರ ಸೋಮಾಪುರಕರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಯಂತಿ ನಗರದ ರುದ್ರಪ್ಪ ವಾಲ್ಮೀಕಿ ಅವರು ನೀಡಿದ ದೂರಿನ ಪ್ರಕಾರ, ಅತಿ ವೇಗ ಈ ಅಪಘಾತಕ್ಕೆ ಕಾರಣವಾಗಿದೆ. ಯಲ್ಲಾಪುರದಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿಗೆ ಕಿರವತ್ತಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಬೈಕು ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕು ಲಾರಿಯ ಎಡಭಾಗದ ಚಕ್ರಕ್ಕೆ ಸಿಲುಕಿದೆ. ಮುಂದೆ ಹೋಗುತ್ತಿದ್ದ ವಾಹನ ಹಿಂದಿಕ್ಕುವುದಕ್ಕಾಗಿ ಚಾಯಪ್ಪ ಸೋಮಾಪುರಕರ್ ಅವರು ವೇಗವಾಗಿ ಬೈಕ್ ಓಡಿಸಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.