ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಸರ್ಕಾರ ಜಾತಿ ಬಗ್ಗೆ ಪ್ರಶ್ನಿಸುತ್ತಿದೆ. ಇದರೊಂದಿಗೆ ಕುಟುಂಬದ ಹಿನ್ನಲೆ, ಆಧಾರ್ ಕಾರ್ಡ ಜೊತೆ ಆಸ್ತಿ, ಆಭರಣಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದೆ. `ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರಿ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಉತ್ತರಿಸಬೇಕು. ಜೊತೆಗೆ ಗಣತಿದಾರರು ಮನೆಯವರೆಗೆ ಬರುವವರೆಗೆ ಕಾಯದೇ ಆನ್‌ಲೈನ್ ಮೂಲಕ ಭಾಗವಹಿಸಿ ಮಾಹಿತಿ ಒದಗಿಸಬೇಕು’ ಎಂದು ಜಿಲ್ಲಾಡಳಿತ ಹೇಳಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸುವ ಕಾರ್ಯ ಜೋರಾಗಿದೆ. ಈಗಾಗಲೇ ರಾಜ್ಯಾದ್ಯಂತ ಸಮೀಕ್ಷೆ ಕಾರ್ಯ ಶುರುವಾಗಿದ್ದು, ಅನೇಕ ಶಿಕ್ಷಕರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. `ಈ ಸಮೀಕ್ಷೆಗಾಗಿ ಮನೆಗಳಿಗೆ ಗಣತಿದಾರರು ಬರುವವರೆಗೆ ಕಾಯದೇ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಯಂ ಘೋಷಣೆ ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಬೇಕು’ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್‌ಲೈನ್ ಸಭೆ ನಡೆಸಿದ ಅವರು `ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡುತ್ತಿದ್ದಾರೆ. ಅವರು ಗಣತಿ ಕಾರ್ಯ ನಡೆಸುತ್ತಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಣತಿದಾರರ ಆಗಮನಕ್ಕಾಗಿ ನಿರೀಕ್ಷಿಸಬಾರದು’ ಎಂದು ಸೂಚಿಸಿದ್ದಾರೆ. ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿಯೂ `ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ವೆಬ್‌ಸೈಟ್ ಕ್ಲಿಕ್ ಮಾಡಿ, ಮಾಹಿತಿ ನೀಡಬೇಕು’ ಎಂದವರು ಹೇಳಿದ್ದಾರೆ.
`ಹೆಚ್ಚು ಸಿಬ್ಬಂದಿ ಹೊಂದಿದ ಪೊಲೀಸ್, ಆರೋಗ್ಯ, ಶಿಕ್ಷಣ, ಜಿಲ್ಲಾ ಪಂಚಾಯತ್ ಮೊದಲಾದ ಇಲಾಖೆಯವರು ಈ ಬಗ್ಗೆ ಕೆಲಸ ಶುರು ಮಾಡಬೇಕು. ಹೊರಗುತ್ತಿಗೆ ಸಿಬ್ಬಂದಿ ಸಹ ಸ್ವಯಂ ಪ್ರೇರಣೆಯಿಂದ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕು’ ಎಂದವರು ಹೇಳಿದ್ದಾರೆ. `ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್ ದಾಖಲೆಗಳನ್ನು ಸಿದ್ದವಾಗಿದ್ದಲ್ಲಿ 15 ನಿಮಿಷದ ಒಳಗೆ ಸಮೀಕ್ಷೆ ಮುಗಿಸಲು ಸಾಧ್ಯ. ಮುಂದಿನ 2 ದಿನಗಳು ರಜೆ ಇದ್ದು, ಬಿಡುವಿನ ಅವಧಿಯಲ್ಲಿ ಸರ್ಕಾರಿ ನೌಕರರು ಕುಟುಂಬದ ಸಮೀಕ್ಷೆ ಮುಗಿಸಬೇಕು. ಅಕ್ಟೊಬರ್ 3ರಂದು ಎಲ್ಲಾ ಇಲಾಖೆಯವರು ಈ ವಿಷಯದ ಪ್ರಗತಿ ವರದಿ ಸಲ್ಲಿಸಬೇಕು’ ಎಂದವರು ಸೂಚಿಸಿದ್ದಾರೆ.
ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್, ಜಿಲ್ಲಾ ವಾರ್ತಾಧಿಕಾರಿ ಬಿ ಶಿವಕುಮಾರ್, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಕ್ಕ ಮಾದರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಇದ್ದರು.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ