ಗೋಕರ್ಣ ಬಳಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಮೂವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಜೇನು ಹುಳುವಿನ ದಾಳಿಗೆ ಬೆದರಿ ಆ ಮೂವರು ದಿಕ್ಕೆಟ್ಟು ಓಡಿದ್ದಾರೆ.
ಸೋಮವಾರ ಬಂಕಿಕೊಡ್ಲದ ಅಡಿಗೋಣ ರಸ್ತೆ ಮಾರ್ಗವಾಗಿ ಸಂಚರಿಸುವವರಿಗೆ ಜೇನು ಹುಳುಗಳು ಕಚ್ಚಿವೆ. ಶೇಖರ ಆಗೇರ ಹಾಗೂ ಅವರ ಇಬ್ಬರು ಸ್ನೇಹಿತರು ಈ ಮಾರ್ಗವಾಗಿ ಸಂಚರಿಸಿದ್ದು, ಅವರು ದಾಳಿಗೆ ತುತ್ತಾಗಿ ಕಂಗಾಲಾಗಿದ್ದಾರೆ. ಜೇನು ದಾಳಿ ಪರಿಣಾಮ ಶೇಖರ ಆಗೇರ್ ಅವರು ತೀವೃ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದಾರೆ.
ಶೇಖರ ಆಗೇರ್ ಅವರ ಜೊತೆ ಸಂಚರಿಸುತ್ತಿದ್ದ ಮತ್ತಿಬ್ಬರು ಜೇನು ಹುಳುಗಳಿಂದ ಕಚ್ಚಿಸಿಕೊಂಡಿದ್ದಾರೆ. ತಕ್ಷಣ ಶೇಖರ ಆಗೇರ್ ಹಾಗೂ ಮತ್ತೊಬ್ಬರು ಬಂಕಿಕೊಡ್ಲದ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೊಬ್ಬರಿಗೆ ಜೇನು ಕಚ್ಚಿದ್ದರೂ ಅವರು ಮನೆಯಲ್ಲಿಯೇ ಆರೈಕೆಪಡೆಯುತ್ತಿದ್ದಾರೆ. ಅವರಿಗೆ ಕಚ್ಚಿದ ನೋವುಹೊರತುಪಡಿಸಿ ಬೇರೆ ಸಮಸ್ಯೆ ಆಗಿಲ್ಲ.
ಶೇಖರ ಆಗೇರ್ ಅವರು ಪ್ರಾಥಮಿಕ ಚಿಕಿತ್ಸೆ ನಂತರವೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.