ಕಾರವಾರ ಅರ್ಬನ್ ಬ್ಯಾಂಕ್‌ಗೆ ಲಿಕ್ವಿಡೇಟರ್ ಆಗಿ ಮಮತಾ ನಾಯಕ ಅವರು ನೇಮಕವಾಗಿದ್ದಾರೆ. ಮಂಗಳವಾರ ಅವರು ತಮ್ಮ ಅಧಿಕಾರ ಸ್ವೀಕರಿಸಿದ್ದಾರೆ.
`ಆರ್‌ಬಿಐ ನಿರ್ದೇಶನದಂತೆ ಇಷ್ಟು ದಿನ ಬಂದ್ ಆಗಿದ್ದ ಕಾರವಾರ ಅರ್ಬನ್ ಬ್ಯಾಂಕು ಇದೀಗ ಮತ್ತೆ ಕೆಲಸ ಶುರು ಮಾಡಲಿದೆ. ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಮರಳಲಿದ್ದಾರೆ. ಗ್ರಾಹಕರ ಠೇವಣಿ ಹಣದ ವಿಮಾ ಮೊತ್ತ ನೀಡಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ’ ಎಂದು ಮಮತಾ ನಾಯಕ ಅವರು ಮಾಹಿತಿ ನೀಡಿದರು.
`ಗ್ರಾಹಕರ 33.65 ಕೋಟಿ ರೂ ಹಣಕ್ಕೆ ವಿಮೆ ಸಿಗಲಿದೆ. ಇದರ ಕುರಿತಾದ ಷರತ್ತುಗಳ ಬಗ್ಗೆ ತಿಳಿದು ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ. 2 ಸಾವಿರಕ್ಕೂ ಅಧಿಕ ಜನರಿಗೆ ಪರಿಹಾರ ಬರಬೇಕಿದ್ದು, ಅದನ್ನು ಕೊಡಿಸುವುದೇ ನಮ್ಮ ಮೊದಲ ಕೆಲಸ’ ಎಂಬ ಭರವಸೆ ನೀಡಿದರು.
`ಕ್ಲೇಮು ವಿತರಿಸಿದ ನಂತರ ಬ್ಯಾಂಕಿಗೆ ಬರಬೇಕಾದ ಸಾಲ ವಸೂಲಾತಿ ಗಮನಿಸಲಾಗುತ್ತದೆ. ಮೊದಲಿನ ಮಾದರಿಯಲ್ಲಿ ಬ್ಯಾಂಕು ಕೆಲಸ ಮಾಡಲಿದ್ದು, ಲಿಕ್ವಿಡೇಟರ್ ನೇತೃತ್ವದಲ್ಲಿ ಎಲ್ಲ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಸಾಲ ವಸೂಲಾತಿಗೆ ಈ ಹಿಂದಿನ ಕ್ರಮಗಳನ್ನು ಅನುಸರಿಲಾಗುತ್ತದೆ’ ಎಂದು ತಿಳಿಸಿದರು.