ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನಿವಾಸಿ ಭಾರತೀಯರು ಹಾಗೂ ಹೊರರಾಜ್ಯದವರು ಭೂಮಿ ಖರೀದಿಸುತ್ತಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಲಿಂಗರಾಜ ಯಶವಂತ ನಾಯ್ಕ ಅವರು ಆತಂಕವ್ಯಕ್ತಪಡಿಸಿದ್ದಾರೆ. ಹೀಗೆ ಮುಂದುವರೆದರೆ ಸ್ಥಳೀಯರ ವಸತಿಗೂ ಭೂಮಿ ಸಿಗುವುದು ಕಷ್ಟವಾಗಿದ್ದು, ಇದಕ್ಕೆ ನಿಯಂತ್ರಣ ಅಗತ್ಯ ಎಂದು ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಹೊನ್ನಾವರದ ಲಿಂಗರಾಜ ಯಶವಂತ ನಾಯ್ಕ ಅವರು ಭೂಮಿ ಹಾಗೂ ಹೂಡಿಕೆ ವಿಷಯದಲ್ಲಿ ಜನ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಭಟ್ಕಳದಿಂದ ಕಾರವಾರದವರೆಗೆ ಸಮೀಕ್ಷೆ ನಡೆಸಿದ ಅವರಿಗೆ ಈಚೆಗೆ ಹೊರಭಾಗದ ಅನೇಕರು ಇಲ್ಲಿ ಭೂಮಿ ಖರೀದಿಸಿದ ವಿಷಯ ಗಮನಕ್ಕೆ ಬಂದಿದೆ. ಅದರಲ್ಲಿಯೂ ಅಂಕೋಲಾ ಬಳಿ ಸಾಕಷ್ಟು ಪ್ರಮಾಣದಲ್ಲಿ ಅನಿವಾಸಿ ಭಾರತೀಯರು ಹಾಗೂ ಹೊರ ರಾಜ್ಯದವರು ಜಾಗ ಖರೀದಿಸುತ್ತಿದ್ದು, ಭವಿಷ್ಯದ ಬದಲಾವಣೆಗಳ ಬಗ್ಗೆ ಅಅವರು ಮುಖ್ಯಮಂತ್ರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.
`ಸಾಗರಮಾಲಾ ಯೋಜನೆ ಅಡಿ ತದಡಿ ಪ್ರದೇಶ ಅಭಿವೃದ್ಧಿ ಆಗಲಿದೆ. ಕೇಣಿಯಲ್ಲಿ ಖಾಸಗಿ ಬಂದರು ಬರುವ ಸಾಧ್ಯತೆಗಳಿವೆ. ಅಂಕೋಲಾದಲ್ಲಿ ವಿಮಾನ ನಿಲ್ದಾಣ ಸೇರಿ ಇನ್ನಿತರ ಅನೇಕ ಅಭಿವೃದ್ಧಿ ಆಗಲಿದೆ. ಇದರಿಂದ ಆ ಭಾಗದ ಪ್ರವಾಸೋದ್ಯಮ ಬೆಳವಣಿಗೆ ಹೆಚ್ಚಾಗಲಿದೆ. ಇದನ್ನು ಅರಿತು ಅನೇಕ ಅನಿವಾಸಿ ಭಾರತೀಯರು ಅಂಕೋಲಾದಲ್ಲಿ ಭೂಮಿ ಖರೀದಿಸುತ್ತಿದ್ದಾರೆ. ಹೊರ ರಾಜ್ಯದ ಜನ ಸಹ ಇಲ್ಲಿ ಭೂಮಿ ಮೇಲೆ ಹೂಡಿಕೆ ಮಾಡಿದ್ದಾರೆ. ಇದರಿಂದ ಭವಿಷ್ಯದಲ್ಲಿ ಸ್ಥಳೀಯರಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚಿವೆ’ ಎಂದವರು ವಿವರಿಸಿದ್ದಾರೆ.
`ಸದ್ಯ ಈ ಭಾಗದಲ್ಲಿ ಪ್ರತಿ ಗುಂಟೆಗೆ 5-10 ಲಕ್ಷ ರೂ ದರದಲ್ಲಿ ಭೂಮಿಯ ಬೆಲೆಯಿದೆ. ಅನೇಕ ಯೋಜನೆಗಳು ಜಾರಿಯಾದ ನಂತರ ಗುಂಟೆಗೆ 50 ಲಕ್ಷ ರೂ ಬೆಲೆ ಬಂದರೂ ಅಚ್ಚರಿಯಿಲ್ಲ. ಅಂಥ ಪರಿಸ್ಥಿತಿಯಲ್ಲಿ ಕನ್ನಡಿಗರು ತಿಂಗಳಿಗೆ 30 ಸಾವಿರ ರೂ ಬಾಡಿಗೆ ಕೊಟ್ಟು ನೆಲೆಸಬೇಕಾದ ಸ್ಥಿತಿ ನಿರ್ಮಾಣವಾಗಲಿದ್ದು, ಅಲ್ಪ ಹಣದ ಆಸೆಗೆ ಇದೀಗ ಅನ್ಯರಿಗೆ ಭೂಮಿ ಮಾರಾಟ ಮಾಡಿದವರು ಪಶ್ಚಾತಾಪಪಡೆಬೇಕಾದ ಪರಿಸ್ಥಿತಿ ಎದುರಾಗಬಹುದು’ ಎಂದವರು ಅಂದಾಜಿಸಿದ್ದಾರೆ.
`ಸಿoಗಾಪುರದಲ್ಲಿ ಸಿಎನ್‌ಜಡ್ ಡೆವಲಪ್ ಆದಾಗ ಸಹ ಹೀಗೆ ಆಗಿತ್ತು. ಕೊನೆಗೆ ಅಲ್ಲಿಯ ಜನರ ವಸತಿಗೆ ಭೂಮಿ ಇಲ್ಲದ ಹಾಗಾಯಿತು. ಹೀಗಾಗಿ ಅನ್ಯರು ಇಲ್ಲಿ ಭೂಮಿ ಖರೀದಿಸದಂತೆ ತಡೆಯಬೇಕು. ಜನ ಸಹ ಭೂಮಿ ಮಾರಾಟ ಮಾಡುವಾಗ ಅನ್ಯರಿಗೆ ಕೊಡುವುದನ್ನು ತಪ್ಪಿಸಬೇಕು’ ಎಂದವರು ಮನವಿ ಮಾಡಿದ್ದಾರೆ. `ಗಿಡ-ಮರ ಬೆಳೆಸಲು ಯೋಗ್ಯವಿಲ್ಲದ ಭೂಮಿಯನ್ನು ಡಿಪಾರೆಸ್ಟ್ ಮಾಡಿ ಅದನ್ನು ಜನರಿಗೆ ಕೊಡಬೇಕು’ ಎಂದು ಸಹ ಲಿಂಗರಾಜ ಯಶವಂತ ನಾಯ್ಕ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.