ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಅಕ್ಟೊಬರ್ 2ರವರೆಗೂ ಜಿಲ್ಲೆಯಲ್ಲಿ ಮಳೆಯಾಗುವ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಮಾಹಿತಿ ಪ್ರಕಟಿಸಿದೆ.
ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ನೀಡಿದ ಸೂಚನೆ ಪ್ರಕಾರ ಜಿಲ್ಲಾಡಳಿತ ಮಳೆ ಮಾಹಿತಿ ರವಾನಿಸಿದೆ. ಅದರ ಪ್ರಕಾರ, ಕರಾವಳಿ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಮಲೆನಾಡು ಪ್ರದೇಶದಲ್ಲಿಯೂ ಮಳೆ ಮುಂದುವರೆಯಲಿದೆ.
ಹೀಗಾಗಿ ಅಕ್ಟೊಬರ್ 2ರವರೆಗೂ ಯಲ್ಲೊ ಅಲರ್ಟ ಘೋಷಿಸಲಾಗಿದೆ. ಮಳೆ ಹಿನ್ನಲೆ ಅರಬ್ಬಿ ಸಮುದ್ರದ ವಾತಾವರಣ ಸಹ ಸರಿ ಇಲ್ಲದ ಕಾರಣ ಸಣ್ಣ ಹಾಗೂ ಮಧ್ಯಮ ಗಾತ್ರದ ದೋಣಿಗಳು ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ಸಮುದ್ರದ ಕಡೆ ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ನದಿ ಹಾಗೂ ನೀರಿರುವ ಪ್ರದೇಶಗಳಿಗೂ ತೆರಳದಂತೆ ಜಿಲ್ಲಾಡಳಿತ ಸೂಚನೆ ರವಾನಿಸಿದೆ.
ಪಾಲಕರು ಮಕ್ಕಳ ಬಗ್ಗೆ ಗಮನಹರಿಸಬೇಕು. ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಜಾಗೃತರಾಗಿರಬೇಕು. ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳನ್ನು ನಡೆಸಬಾರದು ಎಂದು ಸೂಚಿಸಲಾಗಿದೆ. ತುರ್ತು ಸೇವೆಗಾಗಿ 08382-229857 ಹಾಗೂ ವಾಟ್ಸಪ್ ಸಂಖ್ಯೆ 9483511015 ಸಂಪರ್ಕಿಸುವAತೆ ಜಿಲ್ಲಾಡಳಿತ ತಿಳಿಸಿದೆ.