ಮುಂಡಗೋಡಿನ ಹನುಮಂತ ಚರಾಟಕರ ಅವರು ಲೈಸನ್ಸಪಡೆಯದೇ ಬಂದೂಕುಹೊoದಿದ್ದು, ಅರಣ್ಯ ಸಿಬ್ಬಂದಿ ಅದನ್ನು ಪತ್ತೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ನೀಡಿದ ದೂರಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮುಂಡಗೋಡು ಮೈನಳ್ಳಿಯ ಹನುಮಂತ ಚರಾಟಕರ ಅವರು ಅಕ್ರಮವಾಗಿ ಬಂದೂಕು ಹೊಂದಿದ್ದರು. ವನ್ಯಪ್ರಾಣಿಗಳ ಬೇಟೆಗಾಗಿ ಅದನ್ನು ಬಳಸುತ್ತಿದ್ದರು. ಸಜೀವ ಗುಂಡುಗಳನ್ನು ಸಹ ಅವರು ಜೊತೆಗಿರಿಸಿಕೊಂಡಿದ್ದರು. ಆಗಾಗ ಅವರು ಶಿಖಾರಿಗೆ ಹೋಗುತ್ತಿದ್ದರು. ಹೀಗಾಗಿ ಅರಣ್ಯ ಇಲಾಖೆಯವರು ಸಹ ಹನುಮಂತ ಚರಾಟಕರ ಅವರ ಮೇಲೆ ಕಣ್ಣಿಟ್ಟಿದ್ದರು.
ಸೆ 12ರಂದು ಗೋದನಾಳ ಹುಣಶೆಟ್ಟಿಕೊಪ್ಪದ ಬಳಿ ಹನುಮಂತ ಚರಾಟಕರ ಅವರು ಬಂದೂಕು ಹಿಡಿದು ಓಡಾಡುತ್ತಿದ್ದರು. ಅದನ್ನು ಅರಣ್ಯ ಸಿಬ್ಬಂದಿ ನೋಡಿದರು. ಅರಣ್ಯ ಸಿಬ್ಬಂದಿಯನ್ನು ನೋಡಿದ ಹನುಮಂತ ಚರಾಟಕರ ಅವರು ಕಾಡಿನ ಕಡೆ ಓಡಿದರು. ಅರಣ್ಯ ಸಿಬ್ಬಂದಿ ಸಹ ಅವರ ಬೆನ್ನತ್ತಿದರು. ಕಾಡಿನಲ್ಲಿ ಹನುಮಂತ ಚರಾಟಕರ ಅವರು ಬಂದೂಕಿನ ಜೊತೆಗೆ ಸಿಕ್ಕಿ ಬಿದ್ದರು. ಆ ಬಂದೂಕನ್ನು ಹುಣಶೆಟ್ಟಿಕೊಪ್ಪ ಶಾಖೆಯ ಉಪರಣ್ಯಾಧಿಕಾರಿ ಗುರಪ್ಪ ಗಮನಿಸಿದರು.
ಜೊತೆಗಿದ್ದ 7 ಸಜೀವ ಗುಂಡುಗಳನ್ನು ವೀಕ್ಷಿಸಿದರು. `ಇದಕ್ಕೆ ಪರವಾನಿಗೆ ಇದೆಯಾ?’ ಎಂದು ಪ್ರಶ್ನಿಸಿದರು. ದಾಖಲೆ ತೋರಿಸುವಂತೆ ಕೇಳಿದಾಗ ಹನುಮಂತ ಚರಾಟಕರ ಮಾತನಾಡಲಿಲ್ಲ. ಹೀಗಾಗಿ ಗುರಪ್ಪ ಅವರು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು. ಅದಾದ ನಂತರ ಮುಂಡಗೋಡು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.