ಗೊಂದಲದ ಗೂಡಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿನ ಅನೇಕ ಸಮಸ್ಯೆಗಳು ಒಂದೊoದಾಗಿ ಬಗೆಹರಿಯುತ್ತಿವೆ. ಈ ನಡುವೆ ಸರ್ಕಾರ ನಮ್ಮ ಬಗ್ಗೆ ನಾವೇ ಬರೆದುಕೊಳ್ಳಲು ಅವಕಾಶ ಕೊಟ್ಟಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಗವಾಗಿ ಸರ್ಕಾರ ಮೊದಲು ಹೆಸ್ಕಾಂ ಸಿಬ್ಬಂದಿ ಬಳಸಿ ಪ್ರತಿ ಮನೆಗೂ ಸ್ಟಿಕ್ಕರ್ ಅಂಟಿಸುವ ಕೆಲಸ ಮಾಡಿತ್ತು. ಅದಾದ ನಂತರ ಶಿಕ್ಷಕರನ್ನು ಬಳಸಿಕೊಂಡು ಮನೆ ಮನೆ ಭೇಟಿ ಕಾರ್ಯಕ್ರಮ ಆಯೋಜಿಸಿತ್ತು. ಆದರೆ, ಈ ಅವಧಿಯಲ್ಲಿ ಶಿಕ್ಷಕರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಈ ಸಮೀಕ್ಷೆ ನಡೆಸುವುದು ಕಷ್ಟ ಎಂದು ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದರು. ಮೊದಲ ಎರಡು ದಿನ ಶಿಕ್ಷಕರು ಅನೇಕ ಬಗೆಯ ತೊಂದರೆಗಳನ್ನು ಅನುಭವಿಸಿದ್ದರು. ಶಿಕ್ಷಕರ ಜೊತೆ ಕಂದಾಯ ಅಧಿಕಾರಿಗಳು ಸಹ ತಲೆಬಿಸಿ ಮಾಡಿಕೊಂಡಿದ್ದರು. ಕ್ರಮೇಣ ಆ ಸಮಸ್ಯೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿದ್ದು, ಪರ್ಯಾಯ ದಾರಿಗಳನ್ನು ಹುಡುಕಿತು.
ಸಮೀಕ್ಷೆ ನಡೆಸಲು ಮೊಬೈಲ್ ನೆಟ್‌ವರ್ಕ ಅನಿವಾರ್ಯವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್‌ವರ್ಕ ಸಿಗದಿರುವುದೇ ದೊಡ್ಡ ಸಮಸ್ಯೆ ಆಗಿತ್ತು. ಸದ್ಯ ನೆಟ್‌ವರ್ಕ ಇಲ್ಲದ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 2916 ಬ್ಲಾಕುಗಳನ್ನು ರಚಿಸಲಾಗಿದೆ. 3056 ಗಣತಿದಾರರನ್ನು ನೇಮಿಸಲಾಗಿದೆ. 326860 ಮನೆಗಳನ್ನು ಸಮೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಇದರ ಮುಂದುವರೆದ ಭಾಗವಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವೂ ಸಾರ್ವಜನಿಕರು ಸಹ ಸ್ವಯಂ ಪ್ರೇರಣೆಯಿಂದ ಈ ಗಣತಿಯಲ್ಲಿ ಭಾಗವಹಿಸುವ ಅವಕಾಶ ಕೊಟ್ಟಿದೆ. ಅದರ ಪ್ರಕಾರ ಪ್ರತಿಯೊಬ್ಬರು ತಮ್ಮ ಮೊಬೈಲ್ ಮೂಲಕ ಅವರವರ ವಿವರ ದಾಖಲಿಸುವ ಆಯ್ಕೆಗಳಿವೆ.
ಏನು ಮಾಡಬೇಕು?
ನಮ್ಮ ಜಾತಿ, ಶೈಕ್ಷಣಿಕ ಹಾಗೂ ಸಾಮಾಜಿಕ ವಿವರದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು ಬಯಸುವವರು ಸರ್ಕಾರ ನೀಡಿದ `ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ’ಯ https://kscbcselfdeclaration.karnataka.gov.in/ ಲಿಂಕ್ ಕ್ಲಿಕ್ ಮಾಡಬೇಕು. ಅಲ್ಲಿ ತೆರೆದುಕೊಳ್ಳುವ ಪುಟದಲ್ಲಿ `ನಾಗರಿಕ’ ಎಂದು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಆಗ, OTP ಬರಲಿದ್ದು, ಅದನ್ನು ದಾಖಲಿಸಬೇಕು.
ನOತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೆಯ ಸ್ಥಿತಿ ಗತಿ ಕುರಿತಂತೆ ಮಾಹಿತಿ ಒದಗಿಸಲಾಗುತ್ತದೆ. ಸಮೀಕ್ಷೆ ಬಾಕಿ ಇದ್ದಲ್ಲಿ `ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ’ ಎಂಬ ಅರ್ಜಿ ಭರ್ತಿ ಮಾಡಬೇಕು. ಅದಾದ ನಂತರ `ಆರಂಭಿಸಿ’ ಎಂಬ ಸಂದೇಶ ಕಾಣಲಿದ್ದು, `ಹೊಸ ಸಮೀಕ್ಷೆ ಆರಂಭಿಸಿ’ ಎಂಬುದನ್ನು ಕ್ಲಿಕ್ ಮಾಡಬೇಕು. ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕರ್ ನಲ್ಲಿರುವ UHID ಸಂಖ್ಯೆ ಯನ್ನು ದಾಖಲಿಸಿ ಅಗತ್ಯವಿರುವ ಮಾಹಿತಿಯನ್ನು ಬರೆಯಬೇಕು.
ಈ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ವಿಕಲಚೇತರನರಾಗಿದ್ದರೆ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ಜೊತೆಗಿದ್ದರೆ ಸುಲಭವಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯ. ಈ ಸಮೀಕ್ಷೆ ಯಶಸ್ವಿಯಾಗಿ ಮುಗಿದ ನಂತರ ಮೊಬೈಲಿಗೆ ಮೆಸೆಜ್ ಬರಲಿದೆ.
ನಿಮ್ಮ ಮೊಬೈಲ್ ಮೂಲಕ ನೀವೇ ಗಣತಿಯಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿ: `ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ’