ಗೋಕರ್ಣ ಗುಹೆಯಲ್ಲಿ ವಾಸವಾಗಿದ್ದ ರಷ್ಯಾ ಮಹಿಳೆ ಹಾಗೂ ಮಕ್ಕಳಿಗೆ ತವರಿಗೆ ಮರಳಲು ನ್ಯಾಯಾಲಯದ ಅನುಮತಿ ಸಿಕ್ಕಿದೆ. ಈ ಹಿನ್ನಲೆ ಸೋಮವಾರ ರಷ್ಯಾದ ನೀನಾ ಕುಟೀನಾ ಹಾಗೂ ಆಕೆಯ ಇಬ್ಬರು ಮಕ್ಕಳು ಭಾರತ ತೊರೆದಿದ್ದಾರೆ.
ಗೋಕರ್ಣದ ರಾಮತೀರ್ಥ ಬಳಿಯ ಗುಡ್ಡದ ಗವಿಯಲ್ಲಿ ನೀನಾ ಕುಟೀನಾ ವಾಸವಾಗಿದ್ದರು. ತಮ್ಮ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ಅವರ ಜೊತೆ ನೀನಾ ಕುಟೀನಾ ಅವರು ಅಪಾಯಕಾರಿ ರೀತಿಯಲ್ಲಿ ಬದುಕುತ್ತಿದ್ದರು. 2025ರ ಜುಲೈ 10ರಂದು ಗೋಕರ್ಣ ಪೊಲೀಸರು ವಿದೇಶಿ ಮಹಿಳೆ ಹಾಗೂ ಮಕ್ಕಳು ಗುಹೆಯಲ್ಲಿರುವುದನ್ನು ಪತ್ತೆ ಮಾಡಿದ್ದರು. ಆ ಮೂವರ ಮನವೊಲೈಸಿ ಗುಹೆಯಿಂದ ಹೊರಗೆ ತಂದಿದ್ದರು.
ನoತರದ ವಿಚಾರಣೆಯಲ್ಲಿ ನೀನಾ ಕುಟೀನಾ ಅವರ ವೀಸಾ ಅವಧಿ ಮುಗಿದಿರುವುದು ಅರಿವಿಗೆ ಬಂದಿತ್ತು. ಅನೇಕ ದಿನಗಳಿಂದ ಆ ಮೂವರು ಅಲ್ಲಿಯೇ ವಾಸವಾಗಿರುವುದು ಗೊತ್ತಾಗಿತ್ತು. ಅಪಾಯದ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ರಕ್ಷಿಸಿ ತುಮಕೂರಿನಲ್ಲಿರುವ ವಿದೇಶಿಗರ ನಿಗಾ ಕೇಂದ್ರಕ್ಕೆ ಕಳುಹಿಸಿದ್ದರು. ಅದಾದ ನಂತರ ನೀನಾ ಕುಟೀನಾ ಅವರ ಪತಿ ಡೋರ್‌ಶ್ಲೋಮೋ ಗೋಲ್ಡ್ಸ್ಟೈನ್ ಭಾರತಕ್ಕೆ ಬಂದಿದ್ದು, ಪತ್ನಿಯನ್ನು ರಷ್ಯಾಗೆ ಕಳುಹಿಸುವಂತೆ ಹೈಕೋರ್ಟ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ಎಂ ಶ್ಯಾಮಪ್ರಸಾದ್ ಅವರ ಪೀಠ ತನಿಖೆ ನಡೆಸಿ ರಷ್ಯಾಗೆ ಕಳುಹಿಸಲು ಸೂಚಿಸಿತ್ತು. ವಿಚಾರಣೆ ವೇಳೆ `ತಾಯಿ ಮಗು ಯಾವ ಉದ್ದೇಶಕ್ಕೆ ಗುಹೆಯಲ್ಲಿದ್ದರು?’ ಎಂದು ನ್ಯಾಯಾಲಯಕ್ಕೆ ಉತ್ತರಿಸಲಿಲ್ಲ. ಹೀಗಾಗಿ `ರಷ್ಯಾದ ಅನುಮತಿಯ ಮೇರೆಗೆ ಭಾರತಕ್ಕೆ ಬಂದಿರುವ ಮಹಿಳೆ ಮತ್ತು ಮಕ್ಕಳ ವೀಸಾ ಮುಗಿದರೂ ಭಾರತದಲ್ಲಿ ನೆಲೆಸಿದ್ದರು. ಮಹಿಳೆ ಹಾಗೂ ಮಕ್ಕಳು ವಿದೇಶಕ್ಕೆ ತೆರಳಲು ದಾಖಲೆ ಒದಗಿಸುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದು ನ್ಯಾಯಾಲಯ ಹೇಳಿತ್ತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು `ಮಗುವಿನ ವಂಶವಾಹಿ ದಾಖಲೆ ಆಧಾರದಲ್ಲಿ ರಷ್ಯಾ ಪ್ರಜೆಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿದೆ. ರಷ್ಯಾ ಆಡಳಿತವೂ ತುರ್ತು ಪ್ರವಾಸದ ದಾಖಲೆ ಒದಗಿಸಿದೆ. ಸೆಪ್ಟೆಂಬರ್ 25ರಿಂದ ಅಕ್ಟೋಬರ್ 9ರವರೆಗೆ ತುರ್ತು ಪ್ರವಾಸಕ್ಕೆ ಅನುಮತಿಯಿದ್ದು, ತಾಯಿ ಮತ್ತು ಮಕ್ಕಳು ತಕ್ಷಣ ತೆರಳಲು ಅನುಮತಿ ಬೇಕು’ ಎಂದು ಕೋರಿದ್ದರು.
ಈ ಹಿನ್ನಲೆ ರಷ್ಯಾ ಮಹಿಳೆಗೆ ತವರಿಗೆ ಮರಳಲು ನ್ಯಾಯಾಲಯ ಅನುಮತಿ ನೀಡಿತು. ಡಿಎನ್‌ಎ ಪರೀಕ್ಷೆ ನಡೆಸಿದಾಗ ಆ ಇಬ್ಬರು ಮಕ್ಕಳು ನೀನಾ ಕುಟೀನಾ ಅವರದ್ದೇ ಎಂದು ಅರಿವಾಯಿತು. ಗೋಕರ್ಣ ಪಿಎಸ್‌ಐ ಶಶಿಧರ ಕೆ ಎಚ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪರಮೇಶ್ವರ ಬಿ ಇನ್ನಿತರರು ಸೋಮವಾರ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ನೀನಾ ಕುಟೀನಾ ಹಾಗೂ ಮಕ್ಕಳನ್ನು ರಷ್ಯಾಗೆ ಕಳುಹಿಸಿದರು.