ಅಪರಿಚಿತ ಮೊಬೈಲ್ ಅಪ್ಲಿಕೇಶನ್ ಮೂಲಕ 5ರೂ ಪಾವತಿಸಲು ಹೋಗಿದ್ದ ಕೈಗಾ ಅಣು ವಿದ್ಯುತ್ ಘಟಕದ ನಿವೃತ್ತ ಉದ್ಯೋಗಿಯೊಬ್ಬರು 10 ಲಕ್ಷಕ್ಕೂ ಅಧಿಕ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಸಹಾಯ ಮಾಡುವ ನೆಪದಲ್ಲಿ ಮಾತನಾಡಿಸಿದ ವಂಚಕರು ಬಸವನಗೌಡ ನಾಗನೂರಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಲಪಟಾಯಿಸಿದ್ದಾರೆ.
ಕಾರವಾರದ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಬಸವನಗೌಡ ನಾಗನೂರಿ ಅವರು ಉದ್ಯೋಗಿಯಾಗಿದ್ದರು. ಸದ್ಯ ಮಲ್ಲಾಪುರ ಟೌನ್‌ಶಿಪ್ಪಿನಲ್ಲಿ ವಾಸವಾಗಿರುವ ಅವರಿಗೆ 60 ವರ್ಷ ತುಂಬಿತ್ತು. ಹೀಗಾಗಿ ಅವರು ನಿವೃತ್ತಿಪಡೆದಿದ್ದು, ಮುಂದೆ ಹುಬ್ಬಳ್ಳಿಯಲ್ಲಿ ವಾಸ ಮಾಡಲು ಉದ್ದೇಶಿಸಿದ್ದರು. ಅದಕ್ಕಾಗಿ ನವನಗರದಲ್ಲಿ ಮನೆ ಕಟ್ಟುವ ಕೆಲಸ ಶುರು ಮಾಡಿದ್ದರು.
ಮನೆ ಕೆಲಸ ಚುರುಕಾಗಿ ಸಾಗುತ್ತಿದ್ದು, ಅಡುಗೆ ಮನೆಗೆ ಅಗತ್ಯವಿರುವ ಚಿಮಣಿ ಖರೀದಿಗೆ ಅವರು ಗೂಗಲ್ ಮೊರೆ ಹೋದರು. ಸೆಪ್ಟೆಂಬರ್ 29ರಂದು ಬಸವನಗೌಡ ನಾಗನೂರಿ ಅವರು ಗೂಗಲ್ ಮೂಲಕ ಚಿಮಣಿ ಹುಡುಕಾಟ ನಡೆಸುತ್ತಿದ್ದರು. ಆಗ, ಅವರಿಗೆ ಗ್ಲೇನ್ ಕಂಪನಿಯ ಚಿಮಣಿ ಕಾಣಿಸಿತು. ಆದರೆ, ಅದನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದರು.
ಗೂಗಲ್ ಸರ್ಚ ಮಾಡಿದಾಗ ಸಿಕ್ಕಿದ ಕಸ್ಟಮರ್ ಕೇರ್ ಸಂಖ್ಯೆಗೆ ಫೋನ್ ಮಾಡಿದರು. ಆಗ, ಅಪರಿಚಿತನೊಬ್ಬ ಕರೆ ಸ್ವೀಕರಿಸಿದ್ದು, 5 ರೂ ಪಾವತಿಸಿ ಕಸ್ಟಮರ್ ಕೇರ್’ಗೆ ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಿದರು. 5 ರೂ ಹಣ ಪಾವತಿಗಾಗಿ ಮೊಬೈಲಿನಲ್ಲಿ ಹೆಲ್ಪ ಡೆಸ್ಕ್ ಹಾಸ್ಟ್ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿದರು. ಅದರ ಮೂಲಕ 5 ರೂ ಪಾವತಿಸಲು ತಿಳಿಸಿದರು.
ಬಸವನಗೌಡ ನಾಗನೂರಿ ಅವರು ಕಸ್ಟಮರ್ ಕೇರ್ ಸಿಬ್ಬಂದಿ ಹೇಳಿದ ಮಾತಿನ ಪ್ರಕಾರ ಆ ಅಪ್ಲಿಕೇಶನ್ ಮೂಲಕ ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆ ತೆರೆದರು. 5 ರೂ ಹಣವನ್ನು ಪಾವತಿ ಮಾಡಿದರು. ಅದಾಗಿ ನಿಮಿಷ ಕಳೆಯುವುದರೊಳಗೆ ಬಸವನಗೌಡ ನಾಗನೂರಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ ಹಣ ಕಣ್ಮರೆಯಾಯಿತು. ಏನಾಯಿತು? ಎಂದು ತಿಳಿಯುವಷ್ಟರಲ್ಲಿ ಮತ್ತೆ 5 ಲಕ್ಷ ರೂ ಹಣ ಕಳೆದುಹೋಯಿತು. ಅದಾದ ನಂತರ ಉಳಿದ ಮತ್ತೆ 95 ಸಾವಿರ ರೂ ಸಹ ವಂಚಕರ ಪಾಲಾಯಿತು.
10.95 ಲಕ್ಷ ರೂ ಕಳೆದುಕೊಂಡ ಬಸವನಗೌಡ ನಾಗನೂರಿ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಯಿತು. ಮನೆ ನಿರ್ಮಾಣಕ್ಕಾಗಿ ಮಡಗಿದ್ದ ಕಾಸು ಕಳೆದುಕೊಂಡ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಂದರು. ತಮಗಾದ ಕೆಟ್ಟ ಅನುಭವದ ಬಗ್ಗೆ ತಿಳಿಸಿದರು. ಕಾರವಾರದ ಸೈಬರ್ ಕ್ರೈಂ ಪೊಲೀಸರು ಅವರಿಗೆ ಸಮಾಧಾನ ಮಾಡಿದ್ದು, `ಅಪರಿಚಿತ ಅಪ್ಲಿಕೇಶನ್’ಗಳನ್ನು ಮೊಬೈಲಿನಿಂದ ಡಿಲಿಟ್ ಮಾಡಿ’ ಎಂದು ಅರಿವು ಮೂಡಿಸಿದರು. ವಂಚಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.
ನಿಮಗೆ ಏನೇ ಬೇಕಾದರೂ ಅಧಿಕೃತ ಡೀಲರ್’ನಿಂದ ಖರೀದಿಸಿ. ಅಮೇಜಾನ್ ಮೂಲಕ ಖರೀದಿಗೆ ಇಲ್ಲಿ ಕ್ಲಿಕ್ಕಿಸಿ: AMAZON