ಉದ್ಯೋಗ ಹುಡುಕಾಟದಲ್ಲಿದ್ದ ಜೊಯಿಡಾದ ರಮಾದೇವಿ ಅವರು `ವರ್ಕ ಪ್ರಂ ಹೋಂ’ ನಂಬಿ ಲಕ್ಷ ರೂ ಕಳೆದುಕೊಂಡಿದ್ದಾರೆ. ಎರಡು ಬಾರಿ ಮೋಸ ಹೋದ ನಂತರ ಬೇರೆ ದಾರಿ ಇಲ್ಲದೇ ವಂಚನೆಯ ಬಗ್ಗೆ ತಮ್ಮ ಗಂಡನಲ್ಲಿ ಹೇಳಿದ್ದಾರೆ!
ರಮಾದೇವಿ ಅವರು ಕ್ಯಾಸಲರಾಕ್ ಸರ್ಕಾರಿ ಆಸ್ಪತ್ರೆ ಹತ್ತಿರ ವಾಸವಾಗಿದ್ದಾರೆ. ಮಾಡಲು ಕೆಲಸವಿಲ್ಲದ ಕಾರಣ ಅವರು ಉದ್ಯೋಗ ಹುಡುಕಾಟದಲ್ಲಿದ್ದರು. ಹೀಗಿರುವಾಗ ಅವರಿಗೆ ಅಗಸ್ಟ 19ರಂದು ಇನಸ್ಟಾಗ್ರಾಮಿನ ಮೂಲಕ ಅನನ್ಯ ಪಟೇಲ್ ಎಂಬಾತರು ಸ್ನೇಹಿತರಾದರು. `ಸಣ್ಣ ಸಣ್ಣ ಟಾಸ್ಕ್ ಕೊಡುವೆ. ಅದನ್ನು ಮುಗಿಸಿದರೆ ಕಾಸು ಕೊಡುವೆ’ ಎಂದು ಅನನ್ಯ ಪಟೇಲ್ ಹೇಳಿದರು. ರಮಾದೇವಿ ಅವರು ಅದನ್ನು ಖುಷಿಯಿಂದ ಒಪ್ಪಿದರು. ಕೊಟ್ಟ ಮಾತಿನ ಪ್ರಕಾರ ಅನನ್ಯ ಪಟೇಲ್ ಅವರು ಮೊದಲು 120ರೂ ಹಾಗೂ ನಂತರ 200ರೂಪಾಯಿಗಳನ್ನು ರಮಾದೇವಿ ಅವರ ಖಾತೆಗೆ ಜಮಾ ಮಾಡಿದರು. ಏನೂ ಕೆಲಸ ಮಾಡದೇ 320ರೂ ಬ್ಯಾಂಕ್ ಖಾತೆಗೆ ಬಂದಿದ್ದಕ್ಕಾಗಿ ರಮಾದೇವಿ ಅವರು ಇಡೀ ದಿನ ಖುಷಿಯಾಗಿದ್ದರು.
ಅಗಸ್ಟ 21ರಂದು ಅನನ್ಯ ಪಟೇಲ್ ಅವರು ಮತ್ತೊಂದು ಟಾಸ್ಕ್ ಕೊಡುವುದಾಗಿ ಹೇಳಿದರು. 500ರೂ ಹೂಡಿಕೆ ಮಾಡಿದರೆ 910ರೂ ಸಿಗುವ ಟಾಸ್ಕ್ ಅದಾಗಿದ್ದು, `ಇದಕ್ಕಾಗಿ ಬೀಟ್ ಕಾಯಿನ್ ಅಕೊಂಟ್ ತೆಗೆಯಬೇಕು’ ಎಂದರು. ಅನನ್ಯ ಪಟೇಲ್ ಅವರು ಈ ವೇಳೆ ಸಾಯಿಲ್ ಹುಸೈ ಎಂಬಾತರನ್ನು ಫೋನ್ ಮೂಲಕವೇ ಪರಿಚಯಿಸಿದರು. ಪೂಜಾ, ರಾವಿ, ಬಿರೇಂದ್ರ ಕುಮಾರ, ದೀಪಾಂಕರ ದೇ ಎಂಬಾತರ ಜೊತೆ ರಮಾದೇವಿಯವರನ್ನು ಸೇರಿಸಿ ಅವರೆಲ್ಲರೂ ಒಂದು ಟೆಲಿಗ್ರಾಂ ಗ್ರೂಪ್ ಮಾಡಿದರು. ಅಲ್ಲಿ ಎಲ್ಲರಿಗೂ 3 ಸಾವಿರ, 10 ಸಾವಿರ, 30 ಸಾವಿರ ರೂ ಹೂಡಿಕೆ ಮಾಡುವ ಟಾಸ್ಕ್ ಕೊಟ್ಟರು. ರಮಾದೇವಿ ಅವರನ್ನು ಹೊರತುಪಡಿಸಿ ಎಲ್ಲರೂ ಆ ಹಣ ಹೂಡಿಕೆ ಮಾಡಿದ ದಾಖಲೆ ನೀಡಿದರು. ಆ ದಾಖಲೆ ನೋಡಿ ಪ್ರಭಾವಕ್ಕೆ ಒಳಗಾಗಿ ರಮಾದೇವಿ ಅವರು ಹಣ ಹೂಡಿದರು.
ಈ ವೇಳೆ ಅನನ್ಯ ಪಟೇಲ್ ಅವರು ಶ್ವೇತಾ ಎಂಬಾತರನ್ನು ಪರಿಚಯಿಸಿ ತೆರೆಯಿಂದ ಮರೆಯಾದರು. ಶ್ವೇತಾ ಅವರು ರಮಾದೇವಿ ಅವರ ಬಳಿ `ನೀವು ಹೂಡಿಕೆ ಮಾಡುವಾಗ ತಪ್ಪು ಮಾಡಿದ್ದೀರಿ. ಇದಕ್ಕಾಗಿ ಮತ್ತೆ 50 ಸಾವಿರ ರೂ ಹೂಡಿಕೆ ಮಾಡಿದರೆ ಮಾತ್ರ ನಿಮ್ಮ ಬೀಟ್ ಕಾಯಿನ್ ಅಕೊಂಟ್ ಸರಿಯಾಗುತ್ತದೆ’ ಎಂದರು. ಅದನ್ನು ನಂಬಿದ ರಮಾದೇವಿ ಅವರು 50 ಸಾವಿರ ರೂ ಕೊಟ್ಟರು. ಆಗ, `ಮತ್ತೆ 1 ಲಕ್ಷ ರೂ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ’ ಎಂದು ನಂಬಿಸಿದರು. ಟೆಲಿಗ್ರಾಮ್ ಗ್ರೂಪಿನಲ್ಲಿರುವ ಎಲ್ಲರೂ ಹೂಡಿಕೆ ಮಾಡಿರುವುದನ್ನು ನೋಡಿ ರಮಾದೇವಿ ಅವರು 1 ಲಕ್ಷ ರೂ ನೀಡಿದರು. `ನೀವು ಮೊದಲು ತಪ್ಪಾಗಿ ಹಣ ಹೂಡಿದ ಕಾರಣ ಒಂದೇ ಸಲ ಹಣ ಮರಳಿಸಲು ಆಗುವುದಿಲ್ಲ’ ಎಂದ ಶ್ವೇತಾ ಅವರು 5 ಸಾವಿರ ರೂ ಹಿಂತಿರುಗಿಸಿ ಮತ್ತೆ ಹಣಕ್ಕೆ ಬೇಡಿಕೆ ಇಟ್ಟರು. ಈವರೆಗೆ 193700ರೂ ಹೂಡಿಕೆ ಮಾಡಿ, 6230ರೂ ಮಾತ್ರ ಹಿಂಪಡೆದಿದ್ದ ರಮಾದೇವಿ ಅವರು ಈ ಬಾರಿ ಶ್ವೇತಾ ಅವರು ಹೇಳಿದ ಕಡೆ ಹಣ ಹೂಡಲಿಲ್ಲ.
ಆದರೆ, ಕಾವ್ಯಾ ಅಗರವಾಲ್ ಎಂಬಾತರನ್ನು ಪರಿಚಯಿಸಿಕೊಂಡ ರಮಾದೇವಿ ಅವರು ಅವರು ಹೇಳಿದ ಕಡೆ ಹಣ ಹೂಡಿದರು. `800ರೂ ಹೂಡಿಕೆ 14999ರೂ ಲಾಭ ಕೊಡುವೆ’ ಎಂದು ಇನಸ್ಟಾಗ್ರಾಮಿನ ಮೂಲಕ ಪರಿಚಯವಾದ ಕಾವ್ಯ ಅಗರವಾಲ್ ಅವರು ಹೇಳಿದನ್ನು ನಂಬಿ ಇನ್ನಷ್ಟು ಹಣ ಹೂಡಿದರು. `ಯುಎಸ್ ಡಾಲರ್ ವರ್ಗಾವಣೆ ಮಾಡಬೇಕು. ನೀವು ನಮ್ಮ ಕಂಪನಿ ಉದ್ಯೋಗಿಯಾಗಬೇಕು. ಹೆಚ್ಚಿನ ಲಾಭಬರಲು ಕಾಯಬೇಕು. ಜಿಎಸ್‌ಟಿ ಪ್ರತ್ಯೇಕವಾಗಿ ಪಾವತಿಸಬೇಕು’ ಎಂಬುದನ್ನು ಸೇರಿ ಅನೇಕ ಸುಳ್ಳು ಹೇಳಿದ ಕಾವ್ಯ ಅಗರವಾಲ್ ಅವರು 55549ರೂ ಹಣಪಡೆದು ವಂಚಿಸಿದರು.
ವರ್ಕ ಪ್ರಂ ಹೋಂ ಹುಡುಕಾಟಕ್ಕೆ ಹೋಗಿ ಎರಡು ಬಾರಿ ಮೋಸ ಹೋದ ರಮಾದೇವಿ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲಾ ಹಣ ಕಳೆದುಕೊಂಡರು. ಬೇರೆ ದಾರಿ ತೋರದೇ ಪತಿ ಸುರೇಶ ಅವರಿಗೆ ಹೇಳಿದರು. ಅದಾದ ನಂತರ 1930ಗೆ ಫೋನ್ ಮಾಡಿದ್ದು, ರಾಮನಗರ ಪೊಲೀಸರಿಗೂ ಮಾಹಿತಿ ನೀಡಿದರು. ಸದ್ಯ `ವಂಚಕರನ್ನು ಹುಡುಕಿ, ನನ್ನ ಹಣ ಮರಳಿಸಿ’ ಎಂದವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.